ಚುನಾವಣಾ ಅಕ್ರಮ : 67ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ

ಚುನಾವಣಾ ಅಕ್ರಮ : ೬೭ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ

ತುಮಕೂರು : ಕರ್ನಾಟಕ ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯಲ್ಲಿ ಮಾರ್ಚ್ ೧೬ ರಿಂದ ಏಪ್ರಿಲ್ ೩ರವರೆಗೆ ೮೯೬೧.೯ ಲೀಟರ್ ಭಾರತೀಯ ತಯಾರಿಕಾ ಮದ್ಯ, ೧೮೦೬೯.೧೭ ಲೀ. ಬಿಯರ್ ಹಾಗೂ ೩೦ ಲೀ. ಸೇಂದಿ ಸೇರಿ ೬೭,೦೦,೨೩೦ ರೂ. ಮೌಲ್ಯದ ಮದ್ಯ ಉತ್ಪಾದನೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಚುನಾವಣಾ ಅಕ್ರಮ : ೬೭ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ
ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಅಕ್ರಮವನ್ನು ತಡೆಯಲು ೫೮ ವಿಚಕ್ಷಣ ದಳ(ಎಫ್‌ಎಸ್‌ಟಿ-ಫ್ಲೈಯಿಂಗ್ ಸ್ವ್ಯಾಡ್), ೪೪ ಸ್ಥಿರ ಕಣ್ಗಾವಲು ತಂಡ (ಎಸ್‌ಎಸ್‌ಟಿ-ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ) ಹಾಗೂ ೧೧ ಅಬಕಾರಿ ತಂಡವನ್ನು ರಚಿಸಿ ನಿಯೋಜಿಸಲಾಗಿದೆ.

ಜಿಲ್ಲಾದ್ಯಂತ ನಿಯೋಜಿತ ತಂಡಗಳು ಮಾರ್ಚ್ ೧೬ ರಿಂದ ಏಪ್ರಿಲ್ ೩ರವರೆಗೆ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಫ್‌ಎಸ್‌ಟಿ ತಂಡದಿಂದ ೧೦,೯೧,೫೦೦ ರೂ. ಹಾಗೂ ಎಸ್‌ಎಸ್‌ಟಿ ತಂಡದಿಂದ ೩೧,೧೮,೯೫೦ ರೂ. ಸೇರಿ ೪೨.೧೦ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ದಾಖಲೆಯಿಲ್ಲದ ೨೪,೬೦,೫೦೦ ರೂ. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಉಳಿದ ೧೭,೪೯,೯೫೦ ರೂ. ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಜಮೆಯಾಗಿರುವ ೨೪,೬೦,೫೦೦ ರೂ. ಹಣಕ್ಕೆ ಸಮರ್ಪಕ ದಾಖಲೆ ಒದಗಿಸಿದ ನಂತರ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗುವುದು.

ಅದೇ ರೀತಿ ಮಾರ್ಚ್ ೧೬ ರಿಂದ ಏಪ್ರಿಲ್ ೩ರವರೆಗೆ ೧.೭೦ಲಕ್ಷ ರೂ. ಮೌಲ್ಯದ ೫.೩೫ ಕೆ.ಜಿ. ಗಾಂಜಾ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ ೧೨,೫೬,೧೪೬ ರೂ. ಅಂದಾಜು ಮೌಲ್ಯದ ೭೩ ಬಾಕ್ಸ್ ಕುಕ್ಕರ್, ೭೦೦ ಗೋಡೆ ಗಡಿಯಾರ, ೧೨೬ ಸೀರೆ, ೧೨೬.೪೨ ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲಾದ ಪ್ರಕರಣಗಳಲ್ಲಿ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದ ಒಟ್ಟು ೫೨೯ ಪ್ರಕರಣಗಳಿಗೆ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ಮಾಡಲಾಗಿದೆ ಎಂದು ತಿಳಿಸಿದ್ದಾರೆ.