ತುಮಕೂರು- ಸಮಾಜದಲ್ಲಿರುವ ಸಮಸ್ಯೆಗಳ ಪರಿಹಾರ ಕುರಿತು ಜನಸಾಮಾನ್ಯರ ಪರವಾಗಿ ರಾಜಕಾರಣಿಗಳನ್ನು ಪತ್ರಕರ್ತರು ಸಮಸ್ಯೆ ಬಗೆಹರಿಸುವಂತೆ ಕೇಳುವ ಮಾತುಗಳು ಸಮಸ್ಯೆ ಬಗೆಹರಿಸಲಾಗದ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿ ಪತ್ರಕರ್ತರ ಮೇಲೆಯೇ ಕಿಡಿಕಾರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ಅದರಲ್ಲೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಜನಸಾಮಾನ್ಯರ ಸಮಸ್ಯೆ ಬಗೆಹರಿಸಲಾಗದೆ ಪತ್ರಕರ್ತರು ಜನಸಾಮಾನ್ಯರ ಪರವಾಗಿ ಕೇಳುವ ವಿಚಾರಗಳಿಗೆ ಸಿಟ್ಟಾಗಿ ಪತ್ರಕರ್ತರ ಮೇಲೆಯೇ ದಿನೇ ದಿನೇ ಮನಸೋಇಚ್ಛೆ ನಿಂದಿಸುವುದು ಹೆಚ್ಚಾಗುತ್ತಿದೆ.
ಅಂತೆಯೇ ಆ. 15 ರಂದು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಬಳಿಕ ನಡೆದ ಸುದ್ದಿಗೋಷ್ಠಿಯ ಆರಂಭದಲ್ಲೇ ಪತ್ರಕರ್ತರಿಗೆ ಯಾರೂ ಸಹ ನೆಗೆಟಿವ್ ಪ್ರಶ್ನೆ ಕೇಳಬಾರದು ಎಂದು ತಾಕೀತು ಮಾಡಿದರು.
ಹಾಗೆಯೇ ಇಂದು (ಆ.16) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ನೀವು ತಪ್ಪನ್ನು ಹುಡುಕಬೇಡಿ, ಇದು ನಾನು ನಿಮಗೆ ಕೊಡುತ್ತಿರುವ ವಾರ್ನಿಂಗ್, ಈ ಹಿಂದೆಯೂ ಹೇಳಿದ್ದೇನೆ, ಈಗ ನಿಮಗೆ ವಾರ್ನಿಂಗ್ ಕೊಡುತ್ತಿದ್ದೇನೆ. ತಪ್ಪು ಆಗುವುದಕ್ಕೆ ಮೊದಲೇ ನಮಗೆ ತಿಳಿಸಿ, ತಪ್ಪು ಆದ ನಂತರ ಊರಿಗೆಲ್ಲ ಸಾರಿ ಜಿಲ್ಲೆಯ ಮರ್ಯಾದೆ ಕಳೆಯಬೇಡಿ ಎಂದು ಪತ್ರಕರ್ತರನ್ನು ಮೂದಲಿಸಿದರು.
ಇವರ ಮನಸ್ಥಿತಿ ಕಂಡರೆ ಇವರಿಗೆ ಜಿಲ್ಲೆಯಲ್ಲಿ ಇರುವ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ಅದರಿಂದಲೇ ಕೊನೆಯ ಮಾತಾಗಿ ಪತ್ರಕರ್ತರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇದಾದ ಸ್ವಲ್ಪ ಸಮಯದಲ್ಲೇ ನಾನು ತಮಾಷೆಗೆ ನಿಮ್ಮ ಮೇಲಿನ ಪ್ರೀತಿಯಿಂದ ವಾರ್ನಿಂಗ್ ಎಂದು ಹೇಳಿದೆ, ಅದನ್ನ ತಪ್ಪು ತಿಳಿಯಬೇಡಿ, ಸಿರಿಯಸ್ ಆಗಿ ವಾರ್ನಿಂಗ್ ಕೊಟ್ಟಿಲ್ಲ ಎಂದು ಹೇಳಿದರು.
ಒಟ್ಟಿನಲ್ಲಿ ಹೇಳಬೇಕೆಂದರೆ ಇತ್ತೀಚಿನ ದಿನಗಳಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅದ್ಯಾವ ಕಾರಣಕ್ಕೋ ತಿಳಿಯದು, ಪತ್ರಕರ್ತರನ್ನು ನಿಂದಿಸುತ್ತಲೇ ಬರುತ್ತಿದ್ದಾರೆ. ಮುಂದಿನ ದಿನದಲ್ಲಿ ಪತ್ರಕರ್ತರನ್ನು ನಿಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿದು ತಮಗೆ ತಾವೇ ವಾರ್ನಿಂಗ್ ಕೊಟ್ಟಿಕೊಳ್ಳುವ ಸಮಯ ಬೇಗನೆ ಬರಲೆಂದು ಬಯಸೋಣ.