ಶಿರಾ ನಗರದ ಬಿಸಿಎಂ ಹಾಸ್ಟಲ್ ನ ಮಹಮ್ಮದ್ ರಫಿ ಬಿ (17) ಎಂಬ ವಿದ್ಯಾರ್ಥಿ ಬುಧವಾರ ಬೆಳಗಿನ ಜಾವ ಶೌಚಾಲಯಕ್ಕೆ ಹೋದವನು ಅಲ್ಲಿಯೇ ಸಾವನ್ನಪ್ಪಿದ್ದಾನೆ.
ಮೃತ ವಿದ್ಯಾರ್ಥಿ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯ ಹೊಸಳ್ಳಿ ಗ್ರಾಮದ ಭಾಷಾ ಸಾಬ್ ಎಂಬುವರ ಮಗನಾಗಿದ್ದು, ಶಿರಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲನೇ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದನು. ಕೊರೊನಾ ಸಮಯದಲ್ಲಿ ತಂದೆ ಮೃತಪಟ್ಟಿದ್ದು ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದನು.
ಕಳೆದ ಒಂದು ವಾರದಿಂದ ಟೈಫಾಯಿಡ್ ಜ್ವರ ಇದೆ ಎಂದು ರಜೆಯಲ್ಲಿದ್ದ ವಿದ್ಯಾರ್ಥಿ ನಿನ್ನೆ ಹಾಸ್ಟೆಲಿಗೆ ಬಂದಿರುತ್ತಾನೆ. ಮಧ್ಯರಾತ್ರಿ ಅಥವಾ ಬೆಳಗಿನ ಜಾವದಲ್ಲಿ ಶೌಚಾಲಯಕ್ಕೆಂದು ಹೋದ ವಿದ್ಯಾರ್ಥಿ ಗಂಟೆಗಟ್ಟಲೆ ಕಳೆದರೂ ಸಹ ವಾಪಸ್ಸು ಬರದಿದ್ದಾಗ ಅನುಮಾನ ಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ಗೆ ವಿಷಯ ತಿಳಿಸಿರುತ್ತಾರೆ. ಸ್ಥಳಕ್ಕೆ ಆಗಮಿಸಿದ ವೈದ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಶೌಚಾಲಯದಲ್ಲಿ ಕುಸಿದು ಬಿದ್ದ ವಿದ್ಯಾರ್ಥಿಯನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುತ್ತಾರೆ.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ. ಜಯಚಂದ್ರ ಘಟನೆಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಶಿರಾ ತಹಸಿಲ್ದಾರ್ ಆನಂದ ಕುಮಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.