ತುಮಕೂರು- ಗೃಹ ಸಚಿವರ ತವರು ಜಿಲ್ಲೆ ತುಮಕೂರಿನಲ್ಲಿ ಕೆಲ ಭ್ರಷ್ಟ ಪೊಲೀಸ್ ಅಧಿಕಾರಿಗಳು ಗಾಂಜಾ ಸೇವನೆ ಹೆಸರಿನಲ್ಲಿ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ವ್ಯಕ್ತಿಗಳೇನಾದರೂ ಸಿಕ್ಕಲ್ಲಿ ಅವರುಗಳನ್ನು ಠಾಣೆಗೆ ಕರದೊಯ್ದು ನೀವು ಗಾಂಜಾ ಸೇವಿಸಿದ್ದೀರಾ ಎಂದು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ. ನೀವು 5000 ಕೊಟ್ಟರೆ ವೈದ್ಯರಿಂದ ನೀವು ಗಾಂಜಾ ಸೇವನೆ ಮಾಡಿಲ್ಲ ಎಂದು ಸರ್ಟಿಫಿಕೇಟ್ ಪಡೆದು ಬಿಡುತ್ತೇವೆ, ಇಲ್ಲವಾದಲ್ಲಿ ಜೈಲಿಗೆ ಕಳಿಸುತ್ತೇವೆ ಎಂದು ಹೆದರಿಸಿ ಬಹುತೇಕ ಕೆಲ ಭ್ರಷ್ಟ ಪೊಲೀಸ್ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳಿಗೂ ಗೊತ್ತಿದ್ದರೂ ಸಹ ಕೈಕಟ್ಟಿ ಕುಳಿತಿದ್ದಾರೆ ಎಂಬ ಮಾತುಗಳನ್ನು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕೆಲ ಪ್ರಾಮಾಣಿಕ ಅಧಿಕಾರಿಗಳು ನೊಂದು ನುಡಿಯುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಸಚಿವ ಡಾ. ಜಿ. ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲಿ ಇಂಥ ಭ್ರಷ್ಟ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಆಡಳಿತ ಪಕ್ಷದ ಕೆಲ ಮುಖಂಡರುಗಳೇ ರಕ್ಷಣೆಗೆ ನಿಂತಿರುವುದರಿಂದ ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಮುಂದಿನ ದಿನದಲ್ಲಾದರೂ ಉನ್ನತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಗೃಹ ಸಚಿವರು ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಸೂಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬುದು ಪ್ರಜ್ಞಾವಂತ ನಾಗರೀಕರ ಮಾತಾಗಿದೆ.
