ಡಿ.ಸಿ ಅಧಿಕಾರಿಗಳ ಸಭೆ ಕರೆದರೆ ಯಾರೂ ಬರುವುದಿಲ್ಲವಂತೆ…! ಶುಭ ಕಲ್ಯಾಣ್ ಅಳಲು

ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆ : ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು - ಚುನಾವಣಾಧಿಕಾರಿ ಶುಭ ಕಲ್ಯಾಣ್

ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ವಿಷಯದ ಬಗ್ಗೆ ಚರ್ಚಿಸಲು ತಾಲೋಕ್ ಪಂಚಾಯತ್ ಇಒ ಗಳನ್ನು ಸಭೆಗೆ ಜಿಲ್ಲಾಧಿಕಾರಿಗಳು ಕರೆದರೆ ಯಾರು ಬಂದಿಲ್ಲ ಈ ರೀತಿ ಅಸಹಕಾರ ತೋರುವುದು ಸರಿಯಾದ ಕ್ರಮವಲ್ಲ. ಮುಂದೆ ಇದು ಪುನರಾವರ್ತನೆ ಆದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಜೆಜೆಎಂ ಸೇರಿದಂತೆ ಕೆಲವು ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲಿಸಲು ಕರೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಾ.ಪಂ. ಇ ಓಗಳು ತಾವು ಕರೆದಿದ್ದ ಸಭೆಗೆ ಗೈರು ಹಾಜರಾಗಿದ್ದರ ಬಗ್ಗೆ ಸಚಿವರ ಗಮನ ಸೆಳೆದಾಗ ಮಧ್ಯ ಪ್ರವೇಶಿಸಿದ ಜಿ.ಪಂ. ಸಿಇಒ ಡಾ. ಪ್ರಭು ಜಿ ನನ್ನ ಗಮನಕ್ಕೆ ತಂದಿದ್ದರೆ ಸಮಸ್ಯೆ ಸರಿಪಡಿಸುತಿದ್ದೆ ಮೇಡಂ…. ಈಗ ಹೇಳುತ್ತಿದ್ದಾರೆ…. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ…. ಎಂದಾಗ ಸಚಿವರು ಆಕ್ರೋಶಗೊಂಡರು. ತಾಲೂಕು ಪಂಚಾಯತ್ ಇ ಓ ಗಳು ಈ ರೀತಿಯೇಲ್ಲ ಡಿಸಿ ಕರೆದ ಸಭೆಗೆ ಅಸಹಕಾರ ತೋರುವುದು ಸರಿಯಲ್ಲ ಎಂದು ೧೦ ಮಂದಿ ಇಓಗಳಿಗೂ ತರಾಟೆಗೆ ತೆಗೆದುಕೊಂಡು ಇನ್ನು ಮುಂದೆ ಇದೇ ರೀತಿ ಅಸಹಕಾರ ಮರುಕಳಿಸಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಕ್ರಮ ಅನಿವಾರ್ಯ ಎಂದು ಪುನರುಚ್ಚರಿಸಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ ಇಬ್ಬರು ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ಒಟ್ಟಾಗಿ ಹೋಗಬೇಕು, ತಾಪಂ ಇ ಓ ಗಳು ಈ ರೀತಿ ವರ್ತಿಸುವುದು ಸರಿಯಾದ ಕ್ರಮ ಅಲ್ಲ ಎಂದು ಶಾಸಕರಾದ ಬಿ. ಸುರೇಶ್ ಗೌಡ, ಎಂ. ಟಿ.ಕೃಷ್ಣಪ್ಪ ಜಿಲ್ಲಾಧಿಕಾರಿಗಳ ಮಾತಿಗೆ ಧ್ವನಿಗೂಡಿಸಿ ಈ ರೀತಿ ಅಸಹಕಾರ ನೀಡುವುದು ಸರಿಯಾದ ಬೆಳವಣಿಗೆ ಅಲ್ಲ, ಇನ್ನು ಮುಂದೆ ಈ ರೀತಿ ವರ್ತಿಸಬಾರದು ಎಂದಾಗ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಇಲಾಖೆ ಅಧಿಕಾರಿಗಳಿಗೂ ಡಿಸಿ ರವರು ಕರೆದ ಎಲ್ಲಾ ಸಭೆಗಳಿಗೂ ಭಾಗವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ನಡೆದಿರುವ ಜೆಜೆ ಎಂ ಕಾಮಗಾರಿ ಹಣ ೨೦೦ ಕೋಟಿ ಬಾಕಿ ಕೇಂದ್ರ ಸರ್ಕಾರದಿಂದ ಬಂದಿಲ್ಲ, ರಾಜ್ಯ ಸರ್ಕಾರ ತನ್ನ ಪಾಲಿನ ಪೂರ್ಣ ಹಣವನ್ನು ನೀಡಿದೆ. ಪತ್ರವನ್ನು ಕೇಂದ್ರಕ್ಕೆ ಬರೆಯಲಾಗಿದೆ ಎಂದು ಸಿಇಒ ಪ್ರಭು ಜಿ ಸಚಿವರ ಗಮನ ಸೆಳೆದರು. ಮಧ್ಯ ಪ್ರವೇಶಿಸಿದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಜಲ ಶಕ್ತಿ ಯೋಜನೆ ಸಚಿವ ವಿ. ಸೋಮಣ್ಣ ರವರ ಗಮನಕ್ಕೂ ಈ ವಿಷಯ ತರಲಾಗಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆದ ನಂತರವೇ ಹಣ ಬಿಡುಗಡೆಯಾಗಬೇಕಿದೆ. ಅಲ್ಲಿಯವರೆಗೂ ಕೆಲಸ ಮಾಡಿರುವ ಗುತ್ತಿಗೆದಾರರು ತಡೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮೊದಲು ರಾಜ್ಯ ಸರ್ಕಾರದಿಂದಲೇ ಹಣ ಬಿಡುಗಡೆ ಮಾಡಿಸಿಕೊಂಡು ಗುತ್ತಿಗೆದಾರರ ಬಿಲ್ ಪಾವತಿಸಿ ನಂತರ ಕೇಂದ್ರದಿಂದ ಹಣ ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಚಿವ ಪರಮೇಶ್ವರ್ ಈ ಬಗ್ಗೆ ಸಿಎಂ ರವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೆಲಸ ಮಾಡದೆ ನಾಲ್ಕು ಮಂದಿ ಗುತ್ತಿಗೆದಾರರು ಶೇಕಡ ೯೦ರಷ್ಟು ಹಣ ಬಿಲ್ ಮಾಡಿಸಿಕೊಂಡು ಹೋಗಿದ್ದಾರೆ, ಎರಡು ವರ್ಷಗಳಾದರೂ ಕೆಲಸ ಮಾಡಿಲ್ಲ. ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಂದು ಶಾಸಕ ಸುರೇಶ್ ಗೌಡ ಸಭೆಯಲ್ಲಿ ಸಚಿವರ ಗಮನ ಸೆಳೆದರು. ಜಿಲ್ಲಾ ಪಂಚಾಯತ್ ಸಿಇಒ ಈಗಾಗಲೇ ೩-೪ ಬಾರಿ ನೋಟಿಸ್ ನೀಡಿದೆ. ಸಂಬಂಧಪಟ್ಟ ಎ ಇ ಇ ಮತ್ತು ಗುತ್ತಿಗೆದಾರರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಇ ಇ ರವರಿಗೆ ಸಚಿವರು ಸೂಚಿಸಿದರು. ನಿಂತು ಹೋಗಿರುವ ಕೆಲಸ ಗಳನ್ನು ಬೇಗ ಮಾಡಿಸಲು ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ತಮ್ಮ ವಿರುದ್ಧ ಕ್ರಮ ಅನಿವಾರ್ಯ, ಬೇಗ ಕೆಲಸ ಮಾಡಿಸಿ ಇಲ್ಲ ಶಿಸ್ತು ಕ್ರಮಕ್ಕೆ ಸಜ್ಜಾಗಿ ಎಂದು ಇ ಇ ರವರಿಗೆ ಸಚಿವರು ಸೂಚಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ ಬ್ಯಾಚ್ ನಂಬರ್ ಒಂದರಿಂದ ನಾಲ್ಕರವರೆಗೆ ೯೫೩ಕ್ಕೂ ಹೆಚ್ಚು ಕಾಮಗಾರಿ ಕೆಲಸಗಳು ಎರಡು- ಮೂರು ವರ್ಷಗಳಿಂದ ಬಾಕಿ ಉಳಿದಿವೆ ಕೂಡಲೇ ಅವುಗಳನ್ನು ಅಧಿಕಾರಿಗಳು ಮುಗಿಸಲು ಸೂಚಿಸಿ ಎಂದು ಶಾಸಕರುಗಳು ಸಚಿವರನ್ನು ಒತ್ತಾಯಿಸಿದರು. ಆರು ತಿಂಗಳೊಳಗೆ ಎಲ್ಲ ಕೆಲಸವನ್ನು ಮುಕ್ತಾಯಗೊಳಿಸಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ ಎಂದು ಸಚಿವ ಪರಮೇಶ್ವರ್ ತಿಳಿಸಿದರು.

ಹೆಗ್ಗೆರೆ ಗ್ರಾ.ಪಂ. ಪಿಡಿಓ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಚಿವರ ಸೂಚನೆ
ಈ ಮಧ್ಯೆ ಶಾಸಕ ಸುರೇಶ್ ಗೌಡ ಹೆಗ್ಗೆರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯವೈಕರಿ ಬಗ್ಗೆ ಆಕ್ಷೇಪಣೆ ಎತ್ತಿ ಹೆಗ್ಗೆರೆ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಕಸ ಎತ್ತುವುದಿಲ್ಲ. ಪ್ರತಿನಿತ್ಯ ಕಸದ ರಾಶಿ ಬಗ್ಗೆ ಸಾರ್ವಜನಿಕರು ನನಗೆ ಫೋಟೊ ಕಳಿಸುತ್ತಾರೆ. ತಮಗೂ ಆ ಫೋಟೊಗಳನ್ನು ಕಳಿಸುತ್ತೇನೆ, ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಗಬ್ಬೆದ್ದು ನಾರುತ್ತಿವೆ ಎಂದಾಗ ಡಾ. ಜಿ. ಪರಮೇಶ್ವರ್ ಸಹ ನಮ್ಮ ಗೊಲ್ಲಹಳ್ಳಿ-ಹೆಗ್ಗೆರೆ ಸುತ್ತಮುತ್ತಲಲ್ಲಿ ಕಸದ ರಾಶಿ ಎದ್ದು ಕಾಣುತ್ತಿವೆ. ನಾನು ಹೋಗುವಾಗ ಬರುವಾಗ ನನಗೂ ಗೋಚರಿಸುತ್ತದೆ. ಹೆಗ್ಗೆರೆ ಪಿ ಡಿ ಓ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಇಒ ರವರಿಗೆ ಸೂಚಿಸಿದರು.