ತುಮಕೂರು- ಶಿರಾ ತಾಲ್ಲೂಕು ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದು, ಈ ಮಧ್ಯೆ ಶಿರಾ ತಾಲ್ಲೂಕು ಕಸಬಾ ಹೋಬಳಿಯ ಚಿಕ್ಕಗೂಳ ಗ್ರಾಮದ ಕೆರೆಗೆ ಹೇಮಾವತಿ ಮೂಲ ನಾಲೆಯಿಂದ ನೈಸರ್ಗಿಕವಾಗಿ ನೀರು ಹರಿಯಬೇಕಿತ್ತು. ಅದರಂತೆಯೇ ಮಾಜಿ ಸಚಿವರಾದ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವೊಬ್ಬ ರೈತರಿಗೂ ತೊಂದರೆ ಆಗದ ರೀತಿಯಲ್ಲಿ ನೈಸರ್ಗಿಕವಾಗಿ ಚಿಕ್ಕಗೂಳ ಕೆರೆಗೆ ನೀರು ಹರಿಸುವಂತೆ ಸೂಚಿಸಿದ್ದರು.
ಈ ಮಧ್ಯೆ ನೀರು ಸರಾಗವಾಗಿ ಹರಿಯಲು ರೈತರ ಜಮೀನಿನಲ್ಲಿ ಅವಕಾಶ ನೀಡದಿದ್ದ ಪಕ್ಷದಲ್ಲಿ ಮಾತ್ರ ಆ ಜಮೀನಿನ ಪಕ್ಕದಲ್ಲಿ 2 ಅಡಿ ಕಾಲುವೆ ತೆಗೆದು ನೀರು ಹರಿಸಿ ರೈತರು ತಮ್ಮ ಜಮೀನಿನಲ್ಲಿ ನೀರು ಹೋಗಲಿ ಎಂದರೇ ಅವರಿಗೆ ಯಾವುದೇ ರೀತಿಯ ತೊಂದರೆ ನೀಡದೆ ಅವರ ಜಮೀನಿನ ಮುಖಾಂತರವೇ ನೈಸರ್ಗಿಕವಾಗಿ ಚಿಕ್ಕಗೂಳದ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಹೇಳಿದ್ದರು.
ಅದರಂತೆ ಅಧಿಕಾರಿಗಳು ಕೆಲಸ ಮಾಡದೆ ಚಿಕ್ಕಗೂಳದ ಕೆಲ ಕಿಡಿಗೇಡಿಗಳ ಮಾತು ಕೇಳಿ 2 ಅಡಿ ನಾಲೆದೆ ಬದಲಾಗಿ ಗಂಗನಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಅಕ್ರಮವಾಗಿ 8 ರಿಂದ 10 ಅಡಿ ನಾಲೆ ತೆಗೆದು ನೀರು ಹರಿಬಿಟ್ಟಿದ್ದಾರೆ.
ಇದನ್ನು ಕಂಡ ಗಂಗನಹಳ್ಳಿ ಗ್ರಾಮಸ್ಥರು ಈ ಹಿಂದೆ ಹೇಮಾವತಿ ನೀರು ಯಾವ ರೀತಿ ನೈಸರ್ಗಿಕವಾಗಿ ಚಿಕ್ಕಗೂಳದ ಕೆರೆಗೆ ಹರಿಯುತ್ತಿತ್ತೋ, ಅದೇ ರೀತಿ ಈಗಲೂ ಸಹ ನೈಸರ್ಗಿಕವಾಗಿ ಚಿಕ್ಕಗೂಳ ಕೆರೆಗೆ ನೀರು ಹರಿಯಲಿ ಎಂದು ಶಿರಾ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲು ಗ್ರಾಮಸ್ಥರು ಹೋದಾಗ ನಾನು ಇಷ್ಟ ಬಂದ ಹಾಗೆ ಮಾಡುತ್ತೇನೆ, ನೀವು ಇದರ ಬಗ್ಗೆ ಏನಾದರೂ ಮಾತನಾಡಿದರೆ ನಿಮ್ಮ ವಿರುದ್ಧ ಎಫ್ಐಆರ್ ಮಾಡಿಸುತ್ತೇನೆ ಎಂದು ಅತಿರೇಖದ ವರ್ತನೆ ತೋರಿ ಕಂದಾಯ ನಿರೀಕ್ಷಕನಿಂದ ಅವರಿಗೆ ಬೇಕಾದ ರೀತಿ ಒಂದು ವರದಿ ತರಿಸಿಕೊಂಡು ವಿನಾ ಕಾರಣ ರೈತರಿಗೆ ನೀವು ಹೇಮಾವತಿ ನಾಲೆಯ ನೀರನ್ನು ತಡೆದಿದ್ದೀರಾ ಹಾಗೂ ಜಮೀನು ಒತ್ತುವರಿ ಮಾಡಿದ್ದೀರಾ ನೀವು ಈ ಕೂಡಲೇ ಒತ್ತುವರಿ ಜಾಗವನ್ನು ತೆರವುಗೊಳಿಸಿ, ನೀರು ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ಚಿಕ್ಕಗೂಳದ ಕೆರೆ ತುಂಬಿದ ನಂತರ ನೋಟಿಸ್ ನೀಡಿರುವುದು ಹಾಸ್ಯಾಸ್ಪದವಾಗಿದೆ.

ಗಂಗನಹಳ್ಳಿ ಗ್ರಾಮಸ್ಥರು ಚಿಕ್ಕಗೂಳ ಕೆರೆಗೆ ನೀರು ಹೋಗಲು ಯಾವುದೇ ರೀತಿಯ ಅಡಚಣೆ ಮಾಡಿಲ್ಲ. ಅಡೆತಡೆ ಇಲ್ಲದೆ ಚಿಕ್ಕಗೂಳ ಕೆರೆಗೆ ನೀರು ಹರಿಯುತ್ತಿದೆ ಹಾಗೂ ಚಿಕ್ಕಗೂಳ ಕೆರೆಯು ಈಗಾಗಲೇ ತುಂಬಿ ಕೋಡಿ ಬಿದ್ದಿದೆ ಅಂದ ಮೇಲೆ ಗಂಗನಹಳ್ಳಿ ರೈತರು ನೀರು ತಡೆದಿರುವುದು ಎಲ್ಲಿ ಎಂಬುದನ್ನು ತಹಶೀಲ್ದಾರ್ ಅವರು ತಿಳಿಸಬೇಕು.
ಈಗ ತಹಶೀಲ್ದಾರ್ ಅವರು ರೈತರ ಜಮೀನಿನಲ್ಲಿ ಅಕ್ರಮವಾಗಿ ನಾಲೆ ತೆಗೆದು ರಸ್ತೆ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ರೈತರ ಸ್ವಂತ ಜಮೀನಿನಲ್ಲಿ ಕರಾಬು ಇದೆ ಎಂದು ಸುಳ್ಳು ಹೇಳಿ 1 ಗುಂಟೆ ಕರಾಬು ಇದ್ದರೆ ಅದಕ್ಕೆ ಬದಲಾಗಿ 3 ಗುಂಟೆ ಜಮೀನನ್ನು ಕಬಳಿಸಿ ಚಿಕ್ಕಗೂಳದ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲು ಮುಂದಾಗಿರುವುದು ಗಂಗನಹಳ್ಳಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ರೀತಿ ಅಧಿಕಾರಿಗಳು ಮಾಡಿದರೆ ಗಂಗನಹಳ್ಳಿ ರೈತರ ಜಮೀನುಗಳಿಗೆ ನೀರಿನ ವ್ಯವಸ್ಥೆಯೇ ಇಲ್ಲದಂತಾಗುತ್ತದೆ. ನೈಸರ್ಗಿಕವಾಗಿ ನೀರು ಹರಿದರೆ ಯಾವುದೇ ತೊಂದರೆ ಇಲ್ಲ ಎಂಬುದು ಗ್ರಾಮಸ್ಥರ ಮಾತಾಗಿದೆ.
ಚಿಕ್ಕಗೂಳದ ಕೆರೆ 10 ರಿಂದ 15 ದಿನದಲ್ಲಿ ತುಂಬುತ್ತದೆ. 10 ರಿಂದ 15 ದಿನ ನೀರು ಬಿಡುವುದಕ್ಕೋಸ್ಕರ ವರ್ಷಪೂರ್ತಿ ಗಂಗನಹಳ್ಳಿ ಗ್ರಾಮದ ರೈತರಿಗೆ ದಾರಿ ಇಲ್ಲದಂತಾಗುತ್ತದೆ. ರೈತರ ಜಮೀನಿನಲ್ಲಿ 1 ಗುಂಟೆ ಕರಾಬು ಇದ್ದರೆ ಮೂರು ಗುಂಟೆ ಜಮೀನು ಕಬಳಿಸಿ ನಾಲೆ ತೆಗೆಯುವುದು ಎಷ್ಟು ಸಮಂಜಸ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಈ ಕೂಡಲೇ ಮಾಜಿ ಸಚಿವರಾದ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರು ಸಂಬಂಧಪಟ್ಟ ಅಧಿಕಾರಿಗೆ ಎರಡು ಗ್ರಾಮದ ರೈತರಿಗೆ ಯಾವುದೇ ರೀತಿ ತೊಂದರೆ ಆಗದ ರೀತಿಯಲ್ಲಿ ಮೊದಲು ಹೇಗೆ ನೀರು ಹರಿಯುತ್ತಿತ್ತೋ ಅದೇ ರೀತಿ ನೈಸರ್ಗಿಕವಾಗಿ ನೀರು ಹರಿಸುವಂತೆ ಸೂಚಿಸಬೇಕು ಎಂಬುದು ಗಂಗನಹಳ್ಳಿ ಗ್ರಾಮಸ್ಥರ ಮನವಿಯಾಗಿದೆ.