ಅಕ್ರಮ ಸಾಗುವಳಿ ಚೀಟಿ ನೀಡಿದ ತಹಶೀಲ್ದಾರ್ ವಿರುದ್ಧ ಲೋಕಾ ಪ್ರಕರಣ ದಾಖಲು

ತುಮಕೂರು: ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ಮತ್ತು ವಿಷಯ ನಿರ್ವಾಹಕರುಗಳು ಸೇರಿಕೊಂಡು, ಬಗರ್‌ಹುಕುಂ ಕಮಿಟಿಯಲ್ಲಿ ಮಂಜೂರು ಆಗಿಲ್ಲದಿದ್ದರೂ, ಸರ್ಕಾರಿ ದಾಖಲಾತಿಗಳನ್ನು ಅಕ್ರಮವಾಗಿ ತಿದ್ದಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆದ್ದಾರಿ ಬದಿಯ ಮತ್ತು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನುಗಳಿಗೆ ಸಾಗುವಳಿ ಚೀಟಿ ನೀಡಿ, ಖಾತೆ ಮತ್ತು ದಾಖಲೆ ಮಾಡಿರುವ ಸಂಬಂಧ ಲೋಕಾಯುಕ್ತರು ಪ್ರಕರಣ ದಾಖಲಿಸಿ, ದಾಳಿ ನಡೆಸಿದ್ದಾರೆ.

ತುರುವೇಕೆರೆ ತಾಲ್ಲೂಕು ಕಛೇರಿಯ ಹಿಂದಿನ ತಹಶೀಲ್ದಾರ್ ಮತ್ತು ವಿಷಯ ನಿರ್ವಾಹಕರುಗಳು ಬಗರ್‌ಹುಕುಂ ಕಮಿಟಿಯಲ್ಲಿ ಮಂಜೂರು ಆಗಿಲ್ಲದಿದ್ದರೂ ಅಕ್ರಮವಾಗಿ ಸರ್ಕಾರಿ ದಾಖಲಾತಿಗಳನ್ನು ತಿದ್ದಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಹಾಗೂ ಹೆದ್ದಾರಿ ಪಕ್ಕದಲ್ಲಿನ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನುಗಳಿಗೆ ಸಾಗುವಳಿ ಚೀಟಿ ನೀಡಿ, ಖಾತೆ ಮತ್ತು ದಾಖಲೆ ಮಾಡಿ, ಅಕ್ರಮವೆಸಗಿರುವ ಸಂಬಂಧ ತುರುವೇಕೆರೆ ತಾಲ್ಲೂಕು, ದಬ್ಬೇಘಟ್ಟ ಹೋಬಳಿ, ದೇವನಾಯಕನಹಳ್ಳಿ ಗ್ರಾಮದ ವಾಸಿ ರಹಮತ್ ಉಲ್ಲಾ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅದರಂತೆ ದಿನಾಂಕ:೦೩/೧೨/೨೦೨೫ ರಂದು ಮೊ.ನಂ:೧೨/೨೦೨೫ ೫೦೦-೧೨೦(೨), ೪೦೯, ೪೨೦, ೪೬೮, ೪೭೧ ೨.೨.೪ ೨ -೧೩(೧)(೨), ೧೩(೨) ಪ್ರತಿಬಂಧ ಕಾಯ್ದೆ-೧೯೮೮ (ತಿದ್ದುಪಡಿ-೨೦೧೮) ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ತನಿಖಾಧಿಕಾರಿ ರಾಜು.ಟಿ, ಪೊಲೀಸ್ ನಿರೀಕ್ಷಕರು ನೇತೃತ್ವದಲ್ಲಿ ನಾಲ್ಕು ಪೊಲೀಸ್ ಅಧಿಕಾರಿಗಳ ತಂಡಗಳು ತುರುವೇಕೆರೆ ತಾಲ್ಲೂಕು ಕಛೇರಿ, ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿ, ಆರೋಪಿ ಜಿ.ಹೆಚ್.ನಾಗರಾಜು, ಈ ಹಿಂದಿನ ತಹಶೀಲ್ದಾರ್, ತುರುವೇಕೆರೆ ತಾಲ್ಲೂಕು ಮತ್ತು ಎಂ.ಕಲ್ಲೇಶ್, ತುರುವೇಕೆರೆ ತಾಲ್ಲೂಕು ಕಛೇರಿಯ ಹಿಂದಿನ ಹಕ್ಕು ದಾಖಲೆ ಶಿರಸ್ತೇದಾರ್ ರವರುಗಳ ಮನೆಗಳ ಮೇಲೆ ದಾಳಿ ನಡೆಸಿ, ಪ್ರಕರಣಕ್ಕೆ ಪೂರಕವಾದ ದಾಖಲಾತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದು, ತನಿಖೆ ಮುಂದುವರೆದಿದೆ.