ತುಮಕೂರು- ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಾಡದ ತಪ್ಪಿಗೆ ವಿನಾ ಕಾರಣ ಆರೋಪ ಹೊತ್ತು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಇತ್ತೀಚೆಗೆ ಭೂ ಪರಿವರ್ತನೆ ವಿಚಾರದಲ್ಲಿ ಆಕ್ರಮ ಎಸಗಿದ್ದಾರೆ ಎಂದು ದೊಡ್ಡ ಆರೋಪ ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರ ವಿರುದ್ಧ ಕೇಳಿ ಬಂದಿತ್ತಾದರೂ ಸತ್ಯವೇ ಬೇರೆ ಇದೆ.
ಭೂ ಪರಿವರ್ತನೆ ಕಡತ ಜಿಲ್ಲಾಧಿಕಾರಿ ರವರ ಮುಂದೆ ಬಂದಾಗ ಜಿಲ್ಲಾಧಿಕಾರಿ ರವರು ಆ ಕಡತಕ್ಕೆ ಸಂಬಂಧಿಸಿದ ಯಾವುದೇ ಟಿಪ್ಪಣಿ ಬರೆಯದಿದ್ದರೂ ಕಡತ ಅನುಮೋದನೆಗೊಂಡಿತು.
ಈ ವಿಚಾರ ಭೂಪರಿವರ್ತನೆಗೆ ಸಂಬಂಧಿಸಿದ ಮತ್ತೋರ್ವ ನೌಕರನಿಗೆ ತಿಳಿದು, ಆತ ಜಿಲ್ಲಾಧಿಕಾರಿಯ ಗಮನಕ್ಕೆ ತಂದ ಕೂಡಲೇ ತಕ್ಷಣ ಜಿಲ್ಲಾಧಿಕಾರಿ ಗಾಬರಿಗೊಂಡು ಅನುಮೋದನೆ ಆದೇಶವನ್ನು ರದ್ದು ಮಾಡಿದರು.
ನನ್ನ ಗಮನಕ್ಕೆ ಬಾರದೆ ಹೇಗೆ ಆಯಿತು ಎಂದು ಒಮ್ಮೆ ಹಿಂದಿರುಗಿ ನೋಡಿದಾಗ ಕಡತ ಅನುಮೋದನೆಗೆ ಎಡಿಸಿ ರವರ ಸೂಚನೆ ಮೇರೆಗೆ ನೌಕರನೊಬ್ಬ ಅನುಮೋದನೆ ನೀಡಿರುವುದು ತಿಳಿದು ಬಂತು ಎಂದು ಹೇಳಲಾಗುತ್ತಿದೆ.
ಆದರೆ ಎಡಿಸಿ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿ ರವರು ಮುಂದಾಗಿದ್ದರೆ ಇಂದು ಜಿಲ್ಲಾಧಿಕಾರಿ ವಿರುದ್ಧ ಆರೋಪಗಳು ಬರುತ್ತಿರಲಿಲ್ಲ. ಓರ್ವ ನೌಕರನನ್ನು ಅಮಾನತ್ತು ಮಾಡಿ ಸುಮ್ಮನಾದ ಪರಿಣಾಮ ಇಂದು ಭೂ ಅಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಎಡಿಸಿ ರವರು ತಮ್ಮ ಹೆಸರು ಎಲ್ಲೂ ಬರದಂತೆ ಕೆಲ ಪ್ರಭಾವಿ ಪತ್ರಕರ್ತರಿಗೆ ದುಂಬಾಲು ಬಿದ್ದಿದ್ದರಿಂದಲೇ ಇವರ ಹೆಸರು ಎಲ್ಲೂ ಬರಲಿಲ್ಲ ಎಂಬ ಮಾತುಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಕೇಳಿ ಬರುತ್ತಿವೆ.
ಸರ್ಕಾರದ ಮಟ್ಟದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಪ್ಪು ಮಾಡಿಲ್ಲ ಎಂದು ತಿಳಿದು ಪ್ರಕರಣಕ್ಕೆ ಫುಲ್ ಸ್ಟಾಪ್ ಇಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೂ ಸಹ ಡಿಸಿ ಅವರ ಲಾಗಿನ್ ಹೇಗೆ ದುರುಪಯೋಗ ಆಯಿತು ಎಂಬುದೇ ಇಲ್ಲಿರುವ ಯಕ್ಷ ಪ್ರಶ್ನೆ.
ಏಕೆಂದರೆ ಜಿಲ್ಲಾಧಿಕಾರಿಯವರು ಯಾರನ್ನೂ ನಂಬುವುದಿಲ್ಲ ಅಂದ ಮೇಲೆ ಇವರ ಲಾಗಿನ್ ಅನ್ನು ನೌಕರರೊಬ್ಬ ಹೇಗೆ ಓಪನ್ ಮಾಡಿ ಡಿಜಿಟಲ್ ಸಹಿ ಮಾಡಿ ಭೂ ಪರಿವರ್ತನೆಗೆ ಅನುಮೋದನೆ ನೀಡಿದರು ಎಂಬುದೇ ಇಲ್ಲಿ ಉತ್ತರ ಸಿಗದ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಜಿಲ್ಲಾಧಿಕಾರಿ ಅವರೇ ಉತ್ತರಿಸಬೇಕೇ ವಿನಃ ಮತ್ಯಾರೂ ಅಲ್ಲ.
ಶುಭ ಕಲ್ಯಾಣ್ ರವರು ಈ ಹಿಂದೆ ತುಮಕೂರು ಸಿಇಓ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಇವರೇನೂ ತುಮಕೂರು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರಬೇಕೆಂದು ಬಯಸಿ ಬಂದವರಲ್ಲ, ಚುನಾವಣಾ ಆಯೋಗ ಅಂದಿನ ಜಿಲ್ಲಾಧಿಕಾರಿ ಶ್ರೀನಿವಾಸ್ ರವರನ್ನು ತಾತ್ಕಾಲಿಕವಾಗಿ ವರ್ಗಾವಣೆ ಮಾಡಿ ಚುನಾವಣೆ ಮುಗಿಯುವವರೆಗೂ ಬೇರೊಬ್ಬ ಜಿಲ್ಲಾಧಿಕಾರಿಯನ್ನು ನೇಮಿಸಲು ಸೂಚಿಸಿದರನ್ವಯ ಶುಭಕಲ್ಯಾಣ್ ರವರು ತುಮಕೂರು ಜಿಲ್ಲಾಧಿಕಾರಿಯಾಗಿ ಬಂದರು. ನಂತರ ಇವರ ಕಾರ್ಯವೈಖರಿ ಹಾಗೂ ಸ್ವಚ್ಛಾಸ್ತ ಅಧಿಕಾರಿ ಎಂದು ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಇವರನ್ನೇ ಜಿಲ್ಲಾಧಿಕಾರಿಯಾಗಿ ಮುಂದುವರಿಸಿದರು.
ಪ್ರಾರಂಭದಲ್ಲಿ ಇವರ ಕಾರ್ಯವೈಖರಿ ಕೆಲ ಅಧಿಕಾರಿಗಳಿಗೆ ನುಂಗಲಾರದ ತುತ್ತಾಯಿತು. ಯಾವುದೇ ಅಧಿಕಾರಿ ವಿರುದ್ಧ ದೂರು ಬಂದರೂ ಕೂಡಲೇ ಕ್ರಮ ಕೈಗೊಳ್ಳಲು ಮುಂದಾದರು. ಉದಾಹರಣೆಯೊಂದಿಗೆ ಹೇಳಬೇಕೆಂದರೆ, ಈ ಹಿಂದೆ ತುಮಕೂರು ಕಾರ್ಮಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೇಜಾವತಿ ವಿರುದ್ಧ ಆರೋಪ ಕೇಳಿ ಬಂದ ಕೂಡಲೇ ಸಂಬಂಧಪಟ್ಟ ಉನ್ನತ ಅಧಿಕಾರಿಗೆ ತೇಜಾವತಿ ವಿರುದ್ಧ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದರು. ವಿಪರ್ಯಾಸವೆಂದರೆ ತೇಜಾವತಿ ರಕ್ಷಣೆಗೆ ಕಾಂಗೈನ ಓರ್ವ ಶಾಸಕ ಮುಂದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ತೇಜಾವತಿಗೆ ಯಾವುದೇ ತೊಂದರೆಯಾಗದ ರೀತಿ ನೋಡಿಕೊಂಡರು.
ತೇಜಾವತಿ ವಿರುದ್ಧ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದರೂ ಸಹ ಇನ್ನೂ ಯಾವುದೇ ಕ್ರಮ ಆಗಿಲ್ಲ ಅಂದ ಮೇಲೆ ಜಿಲ್ಲಾಧಿಕಾರಿ ಇನ್ನೇನು ಮಾಡಲು ಸಾಧ್ಯ.
ಅಂತೆಯೇ ಅಂದಿನ ವಾರ್ತಾಧಿಕಾರಿ ಮಮತಾ ರವರ ಕಾರ್ಯವೈಖರಿ ಬಗ್ಗೆಯೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದರು.
ಹೀಗೆ ಇನ್ನೂ ಹಲವು ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ ದಿಟ್ಟ ಕ್ರಮ ಕೈಗೊಳ್ಳಲು ಮುಂದಾದರು. ಆದರೆ ರಾಜಕಾರಣಿಗಳು ಇವರ ಕೈಕಟ್ಟಿ ಕೂರುವಂತೆ ಮಾಡಿದ್ದಾರೆ. ಇಂದಿಗೂ ಸಹ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸಲೇಬೇಕೇ ವಿನಃ ನಿಯಮಾನುಸಾರ ಯಾವ ಕಾರ್ಯವನ್ನೂ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಕೇಳಿ ಬರುತ್ತಿವೆ.
ಇಂದಿಗೂ ಸಹ ಜಿಲ್ಲಾಧಿಕಾರಿ ಯಾರಿಂದಲೂ ಹಣದ ನಿರೀಕ್ಷೆ ಮಾಡಿಲ್ಲ, ಅವರಿಗೆ ಮನಸ್ಸು ಬಂದರೆ ಕೂಡಲೇ ಕಡತ ಅನುಮೋದಿಸುತ್ತಾರೆ. ಇಲ್ಲವಾದಲ್ಲಿ ಅಲ್ಲಿ ಇಟ್ಟು ಹೋಗಿ ಎಂದು ಹೇಳುತ್ತಾರೆ ಎನ್ನುತ್ತಾರೆ ಜಿಲ್ಲಾ ಮಟ್ಟದ ಕೆಲ ಅಧಿಕಾರಿಗಳು.
ಇತ್ತೀಚೆಗೆ ದಸರಾ ವಿಚಾರದಲ್ಲಿ ಪತ್ರಕರ್ತರು ಜಿಲ್ಲಾಧಿಕಾರಿ ವಿರುದ್ಧ ಮುನಿಸಿಕೊಂಡಿರುವುದು ಸರಿಯಲ್ಲ.
ಜಿಲ್ಲಾಧಿಕಾರಿ ಅವರಿಗೆ ಪತ್ರಕರ್ತರೆಂದರೆ ಅಪಾರವಾದ ಗೌರವವಿದೆ. ಅದಕ್ಕೆ ಉದಾಹರಣೆ ಎಂದರೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಪಾವಗಡಕ್ಕೆ ಬಂದಾಗ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಾಹೀರಾತನ್ನು ಪತ್ರಿಕೆಗಳಲ್ಲಿ ನೀಡಬೇಕೆಂದು ವಾರ್ತಾ ಇಲಾಖೆಯ ಆಯುಕ್ತರಿಗೆ ಪತ್ರವನ್ನೂ ಬರೆದಿದ್ದರು. ಆದರೆ ಆಯುಕ್ತರು ಇದರ ಬಗ್ಗೆ ಗಮನ ಹರಿಸಲಿಲ್ಲ ಅಂದ ಮೇಲೆ ಇವರು ಏನು ಮಾಡಲು ಸಾಧ್ಯ. ಇಂತಹ ಅಧಿಕಾರಿ ವಿರುದ್ಧ ಪತ್ರಕರ್ತರು ವಿನಾ ಕಾರಣ ಆರೋಪ ಮಾಡುವುದು ಸರಿಯೇ ಎನ್ನುತ್ತಾರೆ ಜಿಲ್ಲಾ ಮಟ್ಟದ ಅಧಿಕಾರಿಗಳು.
ದಸರಾ ವಿಚಾರದಲ್ಲಿ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೆಲಸ ಮಾಡುತ್ತಿದ್ದಾರೆ ಬಿಟ್ಟರೆ, ಅವರು ಸ್ವಇಚ್ಚೆಯಿಂದ ಯಾವುದೇ ಕೆಲಸ ಮಾಡುತ್ತಿಲ್ಲ ಎಂಬ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿ ಬರುತ್ತಿವೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರು ತಾವು ಮಾಡದ ತಪ್ಪಿಗೆ ವಿನಾ ಕಾರಣ ಮುಜುಗರ ಅನುಭವಿಸುವ ಬದಲು ದೀರ್ಘಕಾಲದ ರಜೆ ಇಲ್ಲವೇ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗುವುದೇ ಒಳ್ಳೆಯದು ಎನ್ನುತ್ತಾರೆ ಜಿಲ್ಲಾಧಿಕಾರಿಗಳ ಹಿತೈಷಿಗಳು.