ಕೈ ಮುಖಂಡ ಅನಿಲ್ ವಿರುದ್ಧ ಪರಮೇಶ್ವರ್ ಕಿಡಿ

ಕೈ ಮುಖಂಡ ಅನಿಲ್ ವಿರುದ್ಧ ಪರಮೇಶ್ವರ್ ಕಿಡಿ

ತುಮಕೂರು- ಜಿಲ್ಲಾ ಕಾಂಗ್ರೆಸ್ ಮುಖಂಡ ಅನಿಲ್ ವರ್ತನೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ಕಿಡಿಕಾರಿದ ಪ್ರಸಂಗ ಜರುಗಿದೆ ಎಂದು ಹೇಳಲಾಗುತ್ತಿದೆ.

ಸಚಿವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅನಿಲ್ ಬಹುತೇಕ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪ ಹಾಗೂ ಕೆಲ ಅಧಿಕಾರಿಗಳಿಗೆ ವರ್ಗಾವಣೆ ಮಾಡಿಸಿಕೊಡುವ ಆಮಿಷ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳಿಗೆ ನಿಮ್ಮ ವಿರುದ್ಧ ದೂರು ಹೋಗಿದೆ, ನಾನು ಹೇಳಿ ಸರಿಪಡಿಸುತ್ತೇನೆಂದು ಹೇಳಿ ಕೆಲ ನೌಕರರು ಹಾಗೂ ಅಧಿಕಾರಿಗಳಿಂದ ಹಣ ಪಡೆಯುತ್ತಿದ್ದಾರೆಂಬ ಆರೋಪ ಬಹುದಿನಗಳಿಂದಲೂ ಕೇಳಿ ಬರುತ್ತಿತ್ತು.

ಇತ್ತೀಚೆಗೆ ಅನಿಲ್ ವರ್ತನೆ ಮಿತಿ ಮೀರಿ ಸಿವಿಲ್ ವ್ಯಾಜ್ಯಗಳಿಗೂ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಿಗೆ ಹೋಗಿ ಸಚಿವರ ಆಪ್ತ ಎಂಬುದನ್ನು ದುರುಪಯೋಗಪಡಿಸಿಕೊಂಡು ತಾನು ಹೇಳಿದವರ ಪರ ಪೊಲೀಸರು ಕೆಲಸ ಮಾಡುವಂತೆ ತಾಕೀತು ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಅಂತೆಯೇ ಸಚಿವರ ಪರಿಚಯಸ್ಥರೊಬ್ಬರ ಸಿವಿಲ್ ವ್ಯಾಜ್ಯಕ್ಕೆ ಈತ ಹೋಗಿದ್ದನ್ನು ತಿಳಿದ ಸಚಿವರು ಇತ್ತೀಚೆಗೆ ತಮ್ಮ ನಿವಾಸದ ಬಳಿ ಅನಿಲ್ ವಿರುದ್ಧ ಕಿಡಿಕಾರಿ, ಅಲ್ಲೇ ಇದ್ದ ಎಸ್ಪಿಯವರನ್ನು ಕರೆದು ಈತನ ವಿರುದ್ಧ ಎಫ್ಐಆರ್ ದಾಖಲು ಮಾಡಿ ಎಂದು ಸೂಚಿಸಿದ ಪ್ರಸಂಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಇದೇ ರೀತಿ ಇನ್ನು ಕೆಲ ಮುಖಂಡರು ಸಚಿವರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೆಲ ಕಚೇರಿಗಳು ಸೇರಿದಂತೆ ಪೊಲೀಸ್ ಠಾಣೆಗಳಲ್ಲಿ ತಮ್ಮ ದರ್ಪ ಮೆರೆಯುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಅವರಿಗೂ ಸಚಿವರು ಎಚ್ಚರಿಕೆ ನೀಡಬೇಕು ಎಂಬುದು ನಿಷ್ಠಾವಂತ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಮಾತಾಗಿದೆ.