ತುಮಕೂರು: ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್ ಸುತ್ತಮುತ್ತಲ ಪ್ರದೇಶಗಳನಿವಾಸಿಗಳು ರೈಲ್ವೆಹಳಿ ದಾಟಿ ಮತ್ತೊಂದು ಪ್ರದೇಶಕ್ಕೆ ಹೋಗಿಬರಲು ತೊಂದರೆಯಾಗಿದೆ.ಈ ಭಾಗದಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡುವ ಅಗತ್ಯವಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಪ್ರದೇಶದಲ್ಲಿ ತಾಂತ್ರಿಕವಾಗಿ ಸೂಕ್ತವಾದ ಜಾಗದಲ್ಲಿ ಪಾದಚಾರಿಗಳ ಸಂಚಾರಕ್ಕಾಗಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಜಿ.ಬಿ,ಜ್ಯೋತಿಗಣೇಶ್ ತಿಳಿಸಿದ್ದಾರೆ.
ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ನಾಗರೀಕರ ಸಮಸ್ಯೆ ಆಲಿಸಿದರು. ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್‌ನಲ್ಲಿ ವಾಹನ ಸಂಚಾರದ ಒತ್ತಡವಿದೆ. ಇಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲಾಗುತ್ತಿಲ್ಲ. ಶಾಲಾ ಮಕ್ಕಳು, ವಯೋವೃದ್ಧರು ಅಂಡರ್‌ಪಾಸ್‌ನಲ್ಲಿ ಓಡಾಡಲಾಗುತ್ತಿಲ್ಲ. ಹೀಗಾಗಿ ದೈನಂದಿನ ಕೆಲಸಕಾರ್ಯಗಳಿಗೆ ರೈಲ್ವೆಹಳಿ ದಾಟಿ ಇನ್ನೊಂದು ಭಾಗಕ್ಕೆ ಹೋಗಿಬರುವುದು ತೊಂದರೆಯಾಗಿದೆ ಎಂದು ನಾಗರೀಕರು ಶಾಸಕರಲ್ಲಿ ಸಮಸ್ಯೆ ಹೇಳಿಕೊಂಡರು. ಜೊತೆಗೆ ಈ ಭಾಗದಲ್ಲಿ ರೈಲ್ವೆ ಇಲಾಖೆಯವರು ಹಳಿಯ ಎರಡೂ ಕಡೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ವಿಜಯನಗರ ಸುತ್ತಮುತ್ತಲ ಪ್ರದೇಶದ ಎಸ್.ಎಸ್.ಪುರಂ, ಎಸ್‌ಐಟಿ ಪ್ರದೇಶಗಳಿಗೆ ಹೋಗಲಾಗುತ್ತಿಲ್ಲ.ಹೀಗಾಗಿ ಈ ಭಾಗದಲ್ಲಿ ರೈಲ್ವೆ ಹಳಿ ದಾಟಿ ಹೋಗಲು ಪಾದಚಾರಿ ಮಾರ್ಗ ನಿರ್ಮಾಣ ಮಾಡುವಂತೆ ನಾಗರೀಕರು ಶಾಸಕರಿಗೆ ಮನವಿ ಮಾಡಿದರು.
ರೈಲ್ವೆ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಭಾಗದ ಸೂಕ್ತವಾದ ಸ್ಥಳದಲ್ಲಿ ಉಪ್ಪಾರಹಳ್ಳಿ ಮೇಲ್ಸೇತುವೆ ಬಳಿ ನಿರ್ಮಿಸಿರುವ ಅಂಡರ್‌ಪಾಸ್ ಮಾದರಿಯಲ್ಲಿ ಇಲ್ಲಿಯೂ ಪಾದಚಾರಿ ಮಾರ್ಗ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕರು ಹೇಳಿದರು.ಇದರ ಜೊತೆಗೆ, ಶೆಟ್ಟಿಹಳ್ಳಿ ಗೇಟ್ ಅಂಡರ್‌ಪಾಸ್‌ನಲ್ಲಿರುವ ಫುತ್‌ಪಾತ್ ಸುಸಜ್ಜಿತಗೊಳಿಸಿ ಗ್ರಿಲ್ ಅಳವಡಿಸಿ, ಪಾದಚಾರಿಗಳು ಸುರಕ್ಷಿತವಾಗಿ ಓಡಾಡಲು ಅನುಕೂಲ ಮಾಡಿಕೊಡುವುದಾಗಿಯೂ ಶಾಸಕ ಜ್ಯೋತಿಗಣೇಶ್ ಭರವಸೆ ನೀಡಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಮುಖಂಡರಾದ ದೇವರಾಜು, ದೊಡ್ಡಯ್ಯ, ಶೈಲಾ ನಾಗರಾಜು, ಮರಳಿ, ಪುಟ್ಟರಾಜು, ಮೂರ್ತಿ, ಹೆಚ್‌ಎಂಎಸ್ ಕುಮಾರ್, ಹೆಚ್‌ಎಂಟಿ ಜಗದೀಶ್, ಚಂದ್ರಶೇಖರ್, ನಗರಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ವಿನಯ್ ಮೊದಲಾದವರು ಹಾಜರಿದ್ದರು.