ತುಮಕೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ಕಲ್ಪತರುನಾಡು ತುಮಕೂರಿನಲ್ಲಿ ಅಧಿಕಾರಿಗಳ ಕಾರುಬಾರು ಬಲು ಜೋರಾ ಗಿದ್ದು, ರಾತ್ರೋರಾತ್ರಿ ಮಹಾನಗರ ಪಾಲಿಕೆಯ ಜೆಸಿಬಿಗಳು ಘರ್ಜಿಸುವ ಮೂಲಕ ಕಳೆದ 16 ವರ್ಷಗಳಿಂದ ವಾಸವಾಗಿದ್ದ ಕುಟುಂಬಗಳ ಶೆಡ್‌ಗಳನ್ನು ನೆಲಸಮಗೊಳಿಸಿ ಧ್ವಂಸ ಮಾಡಲಾಗಿದೆ.
ನಗರದ 29ನೇ ವಾರ್ಡ್ ವ್ಯಾಪ್ತಿಯಲ್ಲಿ ಮರಳೂರಿಗೆ ಸೇರುವ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಕಾಲೇಜು ಕಟ್ಟಡಕ್ಕೆ ಹಾಗೂ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಹಾಕಲಾಗಿದ್ದ ಶೆಡ್‌ಗಳನ್ನು ಮಧ್ಯರಾತ್ರಿ ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ಜೆಸಿಬಿ ಯಂತ್ರಗಳು ಪೊಲೀಸ ರೊಂದಿಗೆ ನುಗ್ಗಿ ಶೆಡ್‌ಗಳಲ್ಲಿ ವಾಸವಾಗಿದ್ದವ ರನ್ನು ಹೊರ ಹಾಕಿ ಹಾಗೂ ಅದರೊಳಗಿದ್ದ ಲಕ್ಷಾಂತರ ರೂ. ಸಾಮಗ್ರಿಗಳನ್ನು ಬೀದಿಗೆ ಹಾಕಿ ನೆಲಸಮಗೊಳಿಸಿದ್ದಾರೆ.
ಮಹಾನಗರ ಪಾಲಿಕೆ ಅಧಿಕಾರಿಗಳು ನಡುರಾತ್ರಿ ಏಕಾಏಕಿ ಯಾವುದೇ ನೋಟಿಸ್ ನೀಡದೆ ಧ್ವಂಸ ಮಾಡಿರುವ ಶೆಡ್‌ಗಳ ಜಾಗ ಸತೀಶ್ ಎಂಬುವರಿಗೆ ಸೇರಿದ್ದಾಗಿದ್ದು, ಇವರ ಕುಟುಂಬಕ್ಕೆ ಈ ಜಾಗ ಪಿತ್ರಾರ್ಜಿತವಾಗಿ ಬಂದಿದೆ ಎನ್ನಲಾಗಿದೆ.
ಸದರಿ ಸರ್ವೆ ನಂ. 87/1A ಯಲ್ಲಿ 1 ಎಕರೆ 34 ಗುಂಟೆ ಜಮೀನು ಸತ್ತಿಗಮ್ಮ ಎಂಬುವರಿಗೆ 1927 ರಲ್ಲಿ ರಿಲೀಸ್ ಡೀಡ್ ಮುಖೇನ ಬಂದಿದ್ದು, 1972 ರಿಂದ 2010-11ರ ವರೆಗೂ ಸತ್ತಿಗಮ್ಮ ರವರ ಹೆಸರಿನಲ್ಲಿ ಖಾತೆ ಪಹಣಿ ಇದೆ. 2010-11 ರ ಬಳಿಕ ಸತ್ತಿಗಮ್ಮ ನಿಧನರಾಗಿದ್ದು, ಇವರ ಮೊಮ್ಮಗ ಕೋಂದಡರಾಮಯ್ಯ ಎಂಬುವರ ಹೆಸರಿಗೆ ಖಾತೆ, ಪಹಣಿ ವರ್ಗಾವಣೆ ತಹಶೀಲ್ದಾರ್ ಆದೇಶ ಸಹ ಮಾಡಿದ್ದಾರೆ. ಇದಾದ ಬಳಿಕ ಕೋದಂಡರಾಮಯ್ಯನವರು ತಮ್ಮ ಪತ್ನಿ ಗಂಗಮ್ಮನ ಹೆಸರಿಗೆ ಈ ಜಮೀನನ್ನು ದಾನ ಪತ್ರ ಬರೆದಿದ್ದಾರೆ. ನಂತರ ಗಂಗಮ್ಮ ಅವರು ತನ್ನ ಅಣ್ಣನ ಪತ್ನಿ ಗಿರಿಜಮ್ಮನವರಿಗೆ 22 ಗುಂಟೆ ಜಮೀನನ್ನು ಕ್ರಯಕ್ಕೆ ಮಾರಾಟ ಮಾಡಿದ್ದಾರೆ.
22 ಗುಂಟೆ ಜಮೀನು ಖರೀದಿಸಿರುವ ಗಿರಿಜಮ್ಮ ಅವರು ಆ ಜಾಗವನ್ನು ಡಿಸಿ ಕನ್ವರ್ಷನ್ ಮತ್ತು ಟೂಡಾ ಅನುಮೋದನೆ ಸಹ ಪಡೆದುಕೊಂಡು ಖಾತೆ ಮಾಡಿಸಿ ಕೊಂಡಿದ್ದಾರೆ ಎಂದು ಜಮೀನಿನ ಮಾಲೀಕರಾದ ಸತೀಶ್ ತಿಳಿಸಿದ್ದಾರೆ.
ಇಷ್ಟೆಲ್ಲಾ ಇದ್ದರೂ ಮಹಾನಗರ ಪಾಲಿಕೆಯವರು ನಮಗೆ ಮಹಾರಾಜರು ಬರೆದುಕೊಟ್ಟಿರುವ ಜಾಗ ಎಂದು ದಬ್ಬಾಳಿಕೆ, ದೌರ್ಜನ್ಯದಿಂದ ರಾತ್ರೋರಾತ್ರಿ ಜೆಸಿಬಿ ಯಂತ್ರಗಳನ್ನು ತಂದು ಶೆಡ್‌ಗಳನ್ನು ಧ್ವಂಸ ಮಾಡಿದ್ದಾರೆ. ಸುಮಾರು 200ಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನೊಂದಿಗೆ ನಮ್ಮನ್ನು ಬೀದಿಗೆ ಹಾಕಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ರಕ್ಷಣೆಯಲ್ಲಿ ಜೆಸಿಬಿ ಯಂತ್ರ ಗಳೊಂದಿಗೆ ಸರ್ವೆ ನಂ. 87/1A ಜಾಗಕ್ಕೆ ತೆರಳಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಸತೀಶ್ ಎಂಬುವರಿಗೆ ಸೇರಿದೆ ಎನ್ನಲಾದ ಜಾಗದಲ್ಲಿದ್ದ ಶೆಡ್‌ಗಳಲ್ಲಿ ವಾಸವಾಗಿದ್ದ ಮಹಿಳೆಯರು, ಮಕ್ಕಳು, ವೃದ್ಧರನ್ನು ಮಧ್ಯರಾತ್ರಿ ಅನಾಗರಿಕರಂತೆ ಹೊರದಬ್ಬಿ, ಅದರೊಳಗಿದ್ದ ಸಾಮಗ್ರಿಗಳನ್ನು ಹೊರಗೆ ಎಸೆದು ಶೆಡ್‌ಗಳನ್ನು ಧ್ವಂಸ ಮಾಡಿರುವ ಕ್ರಮವನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ.
ಏಕಾಏಕಿ ಯಾವುದೇ ನೋಟಿಸ್ ನೀಡದೆ ಮಧ್ಯರಾತ್ರಿ ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದು ಈ ಜಾಗಕ್ಕೆ ನುಗ್ಗಿ ಶೆಡ್‌ಗಳನ್ನು ಧ್ವಂಸಗೊಳಿಸುವ ಅಗತ್ಯವೇನಿತ್ತು, ಒಂದು ವೇಳೆ ಈ ಜಾಗ ಮಹಾನಗರ ಪಾಲಿಕೆಯದ್ದಾಗಿದ್ದರೆ ಇಷ್ಟು ದಿನ ಏನು ಮಾಡುತ್ತಿದ್ದರು, ಅದರಲ್ಲೂ ಕಳ್ಳರಂತೆ ಮಧ್ಯರಾತ್ರಿ ಬಂದು ದೌರ್ಜನ್ಯ ಮಾಡಿ ಶೆಡ್‌ಗಳನ್ನು ಧ್ವಂಸ ಮಾಡಿರುವ ಇವರನ್ನು ಅಧಿಕಾರಿಗಳು ಎನ್ನಬೇಕೋ ಅಥವಾ ಬೇರೆ ಏನೆಂದು ಕರೆಯಬೇಕೋ ಎಂದು ಸ್ಥಳೀಯ ಜನತೆ ಆಕ್ರೋಶ ಹೊರ ಹಾಕಿದ್ದಾರೆ.