ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಿಸಿದ ಕ್ಯಾತ್ಸಂದ್ರ ಪೊಲೀಸ್

ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಿಸಿದ ಕ್ಯಾತ್ಸಂದ್ರ ಪೊಲೀಸ್

ತುಮಕೂರು : ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿಯೋರ್ವನನ್ನು ಕ್ಯಾತ್ಸಂದ್ರ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಇ.ಆರ್.ಎಸ್.ಎಸ್-112 ಸಹಾಯವಾಣಿಗೆ ಮೇ.21ರ ಬೆಳಗ್ಗೆ 9 ಗಂಟೆಗೆ ಯತೀಶ್ ಎಂಬ ವ್ಯಕ್ತಿ ಕರೆ ಮಾಡಿ ದೇವರಾಯಪಟ್ಟಣದ ಕೆರೆ ಕೋಡಿ ಹಳ್ಳದ ಕೆಸರಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದಾರೆ ಕೈ ಮಾತ್ರ ಕಾಣಿಸುತ್ತಿದೆ ಎಂದು ತಿಳಿಸಿದರು.

ಈ ಮಾಹಿತಿಯನ್ನು ಕ್ಯಾತ್ಸಂದ್ರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊಯ್ಸಳ-04 ಸಿಬ್ಬಂದಿಯಾದ ಮಹೇಶ್ ಹಾಗೂ ಚಾಲಕ ಬಸವರಾಜು ಅವರಿಗೆ ತಿಳಿಸಲಾಯಿತು. ತಕ್ಷಣ ಕಾರ್ಯ ಪ್ರವೃತ್ತರಾದ 112 ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ನೋಡಿದಾಗ ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿಯ ಕೈ ಮಾತ್ರ ಕಾಣಿಸುತ್ತಿತ್ತು, ವ್ಯಕ್ತಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ,
ಕೂಡಲೇ ಸ್ಥಳೀಯರ ಸಹಾಯದಿಂದ ವ್ಯಕ್ತಿಯನ್ನು ಕೆಸರಿನಿಂದ ಮೇಲೆತ್ತಿ ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಹಾಯವಾಣಿಗೆ ಕರೆ ಬಂದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪಿರ್ಯಾದಿ ಇಲ್ಲದಿದ್ದರೂ ಸಹ ಸಮಯಪ್ರಜ್ಞೆ ತೋರಿ ವ್ಯಕ್ತಿಯೋರ್ವನನ್ನು ರಕ್ಷಿಸಿದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಹೇಶ್ ಹಾಗೂ ಚಾಲಕ ಬಸವರಾಜ್ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.