ಶೆಟ್ಟಿಹಳ್ಳಿ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಪ್ರಸ್ತಾವನೆ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಶೆಟ್ಟಿಹಳ್ಳಿ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಪ್ರಸ್ತಾವನೆ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು : ಸತತ ಮಳೆಯಿಂದ ಮಂಗಳವಾರ ಸಂಜೆ ಕುಸಿದಿದ್ದ ನಗರದ ಶೆಟ್ಟಿಹಳ್ಳಿ ಗೇಟ್ ಸಮೀಪದ ಕೆಳಸೇತುವೆಯ ಸೇವಾ ರಸ್ತೆಯನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೇತುವೆ ನಿರ್ಮಾಣದ ಅವಧಿ ಹಾಗೂ ಏಜೆನ್ಸಿಯ ಬಗ್ಗೆ ಪಾಲಿಕೆ ಇಂಜಿನಿಯರ್ ವಿನಯ್ ಅವರಿಂದ ಮಾಹಿತಿ ಪಡೆದರು. ಶಾಶ್ವತ ಕಾಮಗಾರಿ ಕೈಗೊಳ್ಳುವವರೆಗೆ ಈ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು. ಯಾವುದೇ ಅನಾಹುತ ಸಂಭವಿಸದಂತೆ ರಸ್ತೆಯ ಎರಡೂ ತುದಿಗಳಲ್ಲಿ ಬ್ಯಾರಿಕೇಡ್‌ನಿಂದ ತಡೆಯಿಡಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ರಸ್ತೆ ಕುಸಿತದ ಮಾಹಿತಿ ಬಂದ ಕೂಡಲೇ ಗುಂಡಿಯನ್ನು ಮುಚ್ಚಲಾಗಿದೆ. ತಜ್ಞರ ಸಲಹೆ ಪಡೆದು ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮವಹಿಸಲಾಗುವುದೆಂದು ತಿಳಿಸಿದರು.

ಶೆಟ್ಟಿಹಳ್ಳಿ ರಸ್ತೆ ಪಕ್ಕದಲ್ಲೇ ಇದ್ದ ರೈಲು ಹಳಿಗಳನ್ನು ನಿರ್ಭಯವಾಗಿ ದಾಟುತ್ತಿದ್ದ ಜನರನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸುರಕ್ಷತೆಗಾಗಿ ಕ್ರಮಕೈಗೊಳ್ಳಬೇಕು. ಸದರಿ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಿಳಿಸಿದರಲ್ಲದೆ ಇದೇ ರೀತಿ ಸುರಕ್ಷತಾ ಕ್ರಮಕೈಗೊಳ್ಳದೆ ಇರುವ ಸ್ಥಳಗಳ ಪಟ್ಟಿ ಮಾಡಿ ತಮಗೆ ನೀಡಬೇಕೆಂದು ಪಾಲಿಕೆಗೆ ಸೂಚನೆ ನೀಡಿದರು.

ನಂತರ ನಗರದ ಭದ್ರಮ್ಮ ವೃತ್ತದ ಬಳಿ ಚರಂಡಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು ಧಾರಕಾರ ಮಳೆಯಿಂದು ಚರಂಡಿ ನೀರು ತುಂಬಿ ಹರಿಯುತ್ತಿದ್ದು, ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಿಂದ ದೂರು ಬರುತ್ತಿವೆ. ಚರಂಡಿ ಸುತ್ತ ಫೆನ್ಸಿಂಗ್ ಅಳವಡಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಚರಂಡಿಯಲ್ಲಿ ಕಸ-ಕಡ್ಡಿಗಳನ್ನು ತೆರವು ಮಾಡಬೇಕೆಂದು ನಿರ್ದೇಶನ ನೀಡಿದರು.
ಅಂತರಸನಹಳ್ಳಿಯ ಕೆಳಸೇತುವೆಯಲ್ಲಿ ಮಳೆ ನೀರು ನಿಲ್ಲದಂತೆ ರಸ್ತೆಯನ್ನು ಸರಿಪಡಿಸಬೇಕೆಂದು ಪಾಲಿಕೆಗೆ ಸೂಚಿಸಿದರು.