ತುಮಕೂರು: ಕಾಮಗಾರಿ ಕೆಲಸ ಮಾಡಿದ ಬಿಲ್ ಮಾಡಿಕೊಡಲು ಎ. ಇ. ಇ. ಸೂಚನೆ ಮೇರೆಗೆ 1 ಲಕ್ಷ 51 ಸಾವಿರ ರೂ ಲಂಚ ಪಡೆಯುವಾಗ ಇಬ್ಬರು ಎ. ಇ. ಗಳು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಮೂರೂ ಮಿಕಗಳು ಬಲೆಗೆ ಬಿದ್ದಿವೆ. ಎ. ಇ. ಇ. ಉಮಾ ಮಹೇಶ್ ಸೂಚನೆ ಮೇರೆಗೆ ಗುತ್ತಿಗೆದಾರ ಚಿಕ್ಕೇಗೌಡ ಎಂಬುವರಿಂದ ಹಣ ಪಡೆಯುವಾಗ ಹೊರಗುತ್ತಿಗೆ ಎ. ಇ. ಶಶಿಕುಮಾರ್, ಎ. ಇ. ಕಿರಣ್ ಕುಮಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತುಮಕೂರು ಲೋಕಾಯುಕ್ತ ಎಸ್. ಪಿ. ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಡಿ. ವೈ. ಎಸ್. ಪಿ.ಗಳಾದ ಉಮಾಶಂಕರ್, ಹೆಚ್. ಜಿ. ರಾಮಕೃಷ್ಣ, ಇನ್ಸ್ಪೆಕ್ಟರ್ಗಳಾದ ಮಹಮ್ಮದ್ ಸಲೀಂ, ಶಿವರುದ್ರಪ್ಪ ಮೇಟಿ, ಸುರೇಶ್ ಗೌಡ ಮತ್ತು ಸಿಬ್ಬಂದಿ ವರ್ಗ ಸೋಮವಾರ ಮಧ್ಯಾಹ್ನ ದಿಡೀರ್ ದಾಳಿ ಮಾಡಿ ಮೂರು ಮಂದಿಯನ್ನು ಬಲೆಗೆ ಬೀಳಿಸಿದ್ದಾರೆ.
ಮೂರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ದೃಢಪಡಿಸಿವೆ.