ತುಮಕೂರು- ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಏ. 26 ರಂದು ಮತದಾನ ನಡೆಯಲಿದ್ದು, ಈ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲೇ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿರುವುದರಿಂದ ಮಾ. 28 ರಂದು ಗೆಜೆಟ್ ಅಧಿಸೂಚನೆ ಹೊರ ಬೀಳಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಏ. 4 ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏ. 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಎಂದರು.
ಏ. 8 ರಂದು ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಏ. 26 ರಂದು ಮತದಾನ ನಡೆಯಲಿದೆ. ಜೂ. 4 ರಂದು ಮತ ಏಣಿಕೆ ಕಾರ್ಯ ಜರುಗಲಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 22,77,996 ಮತದಾರರಿದ್ದು, ಈ ಪೈಕಿ 11,29,947 ಪುರುಷ ಮತದಾರರು, 11,47,957 ಮಹಿಳಾ ಹಾಗೂ 92 ಇತರೆ ಮತದಾರರಿದ್ದಾರೆ. ಈ ಬಾರಿ 44,429 ಮಂದಿ ಯುವ ಮತದಾರರು ಇದ್ದಾರೆ ಎಂದ ಅವರು, ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು, ಈ ವ್ಯಾಪ್ತಿಯಲ್ಲಿ 81,4555 ಪುರುಷ, 83,6775 ಮಹಿಳಾ ಮತದಾರರು ಹಾಗೂ 73 ಇತರೆ ಮತದಾರರು ಸೇರಿ ಒಟ್ಟು 16,51ಸ403 ಮತದಾರರಿದ್ದಾರೆ. ಜತೆಗೆ 31,829 ಮಂದಿ ಯುತ ಮತದಾರರಿದ್ದಾರೆ ಎಂದರು.
ಜಿಲ್ಲೆಯಲ್ಲಿ 2618 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, 414 ಸೂಕ್ಷ್ಮ ಮತಗಟ್ಟೆಗಳು, 55 ಮಹಿಳಾ ಮತಗಟ್ಟೆಗಳು, 11 ವಿಕಲಚೇತನ ಮತಗಟ್ಟೆಗಳು ಹಾಗೂ 22 ಯುವ ಅಧಿಕಾರಿಗಳ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯ 2618 ಮತಗಟ್ಟೆಗಳಿಗೆ ಮತದಾನ ಮಾಡಲು 3139 ಸಿಯು, 3139 ಬಿಯು ಹಾಗೂ 3395 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಚುನಾವಣಾ ಕರ್ತವ್ಯಕ್ಕಾಗಿ ಮತಗಟ್ಟೆಗಳಿಗೆ 2618 ಪಿಆರ್‌ಓ, 2618 ಎಪಿಆರ್‌ಓ, 5050 ಪಿಓಗಳು ಸೇರಿ ಒಟ್ಟು 10460 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಬಾರಿ ಜಿಲ್ಲೆಯಲ್ಲಿ 31482 ವಿಕಲಚೇತನ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 28953 ಮತದಾರರು ಸೇರಿ ಒಟ್ಟು 60435 ಮತದಾರರಿದ್ದು, ಈ ಮತದಾರರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಬಿಎಲ್‌ಓಗಳು ವಿಕಲಚೇತನ ಮತ್ತು 85 ವರ್ಷ ಮೇಲ್ಪಟ್ಟ ಮತದಾರರ ಮನೆಗಳಿಗೆ ತೆರಳಿ ನಮೂನೆ 12ಡಿ ಫಾರಂ ಹಂಚಿಕೆ ಮಾಡಲಿದ್ದಾರೆ. ಸದರಿ ಮತದಾರರು ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಲು ಇಚ್ಚಿಸಿದಲ್ಲಿ ನಮೂನೆ 12ಡಿ ಯಲ್ಲಿ ಅರ್ಜಿ ಸಲ್ಲಿಸಿದರೆ ಅಂಚೆ ಮತಪತ್ರಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಮತಚಲಾಯಿಸುವ ದಿನದಂದು ಬಿಎಲ್ಓ, ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್, ವಿಡಿಯೋಗ್ರಾಫರ್‌ಗಳು ಮತದಾರರ ಮನೆಗಳಿಗೆ ತೆರಳಿ ಅಂಚೆ ಮತಪತ್ರಗಳನ್ನು ಸಂಗ್ರಹ ಮಾಡಲಿದ್ದಾರೆ. ಮತ ಚಲಾಯಿಸುವ ದಿನದಂದು ಅಭ್ಯರ್ಥಿಗಳ ಮತಗಟ್ಟೆ ಏಜೆಂಟರ್ ಹಾಜರಿರಲು ಅವಕಾಶ ಇರುತ್ತದೆ ಎಂದರು.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಹಾಗೂ ಯಾವುದೇ ಅಕ್ರಮವಾಗಿ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ 44 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ವ್ಯಕ್ತಿ 50 ಸಾವಿರಕ್ಕಿಂತ ಹೆಚ್ಚು ನಗದನ್ನು ಕೊಂಡೊಯ್ಯುವಂತಿಲ್ಲ. ಹಾಗೆಯೇ 10 ಸಾವಿರಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಹ ತೆಗೆದುಕೊಂಡು ಹೋಗುವಂತಿಲ್ಲ. ಇದಕ್ಕಿಂತ ಹೆಚ್ಚಿನ ನಗದು ಮತ್ತು ವಸ್ತುಗಳನ್ನು ಕೊಂಡೊಯ್ಯಬೇಕಾದರೆ ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದರು.
ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ 90 ಲಕ್ಷ ಚುನಾವಣಾ ವೆಚ್ಚವನ್ನು ಆಯೋಗ ನಿಗದಿಗೊಳಿಸಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಓ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಉಪಸ್ಥಿತರಿದ್ದರು.