ರಾಮದೇವರ ಬೆಟ್ಟದ ಮೇಲೆ ಹಾರಿತು ಜಾಗೃತಿ ಪಟ

ರಾಮದೇವರ ಬೆಟ್ಟದ ಮೇಲೆ ಹಾರಿತು ಜಾಗೃತಿ ಪಟ
ತುಮಕೂರು :  ಜಿಲ್ಲಾ ಮತ್ತು ತುಮಕೂರು ತಾಲ್ಲೂಕು ಸ್ವೀಪ್ ವತಿಯಿಂದ ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮದೇವರ ಬೆಟ್ಟದ ಮೇಲೆ ʼಚುನಾವಣಾ ಪರ್ವ ದೇಶದ ಗರ್ವʼ ಎಂಬ ಘೋಷಾವಾಕ್ಯವಿರುವ ಗಾಳಿಪಟ ಹಾರಿಸುವುದರ ಮೂಲಕ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲಾಯಿತು.
ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಶನಿವಾರ ಬೆಳಗ್ಗೆ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಬೆಟ್ಟಕ್ಕೆ ಚಾರಣ ಹೋಗಿ ಬೆಟ್ಟದ ತುದಿಯಲ್ಲಿ ಕಡ್ಡಾಯ ಮತದಾನಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗುತ್ತಾ ಅಭಿಯಾನವನ್ನು ಮಾಡಿದ್ದಾರೆ.
ರಾಮದೇವರ ಬೆಟ್ಟದ ಮೇಲೆ ಹಾರಿತು ಜಾಗೃತಿ ಪಟ
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯನಿರ್ವಾಹ ಅಧಿಕಾರಿ ಹರ್ಷಕುಮಾರ್ ಕೆ, 18 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಪ್ರಜಾಪ್ರಭುತ್ವ ಸದೃಢವಾಗಿ ಉಳಿಯಬೇಕಾದರೆ ಮತದಾನ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಾವು ಜಾಗೃತಿಗೆ ಗಾಳಿಪಟಗಳನ್ನು ಬಳಿಸಿರುವ ಉದ್ದೇಶವೇನೆಂದರೆ, ಪ್ರತಿಯೊಬ್ಬರೂ ಮತದಾನ ಮಾಡಿ ಬೇಕಾದ ಸರ್ಕಾರವನ್ನು ನಾವೇ ಆಯ್ಕೆ ಮಾಡಿಕೊಂಡು ಸ್ವಚ್ಚಂದವಾಗಿ ಸಮಾಜದಲ್ಲಿ ಬದುಕಬಹುದು ಎನ್ನುವುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಏಪ್ರಿಲ್ 26ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಕೃಷಿ ಉಪ ನಿರ್ದೇಶಕರಾದ ಅಶೋಕ್, ಕಾರ್ಯನಿರ್ವಾಹಕ ಅಧಿಕಾರಿ ಹರ್ಷಕುಮಾರ್ ಕೆ, ತಹಶೀಲ್ದಾರ್ ಸಿದ್ದೇಶ್, ತಾಲ್ಲೂಕು ಯೋಜನಾಧಿಕಾರಿ ಲೋಕೇಶ್ ಕುಮಾರ್, ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ, ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ, ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಭಾಗಿಯಾಗಿದ್ದರು.