ತುಮಕೂರು:ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳಿಗೆ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಭೇಟಿ ನೀಡಿ, ಅಧಿಕಾರಿಗಳ ಕಾರ್ಯವೈಖರಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.
ತುಮಕೂರಿನ ಎಪಿಎಂಸಿ ಯಾರ್ಡಿನಲ್ಲಿ ನಿರ್ಮಿಸಿರುವ ನ್ಯಾಫೇಡ್ ಕೊಬ್ಬರಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು,ಇದುವರೆಗೂ ನೊಂದಣಿಯಾಗಿರುವ ರೈತರ ಸಂಖ್ಯೆ ಮತ್ತು ಅಂದಾಜು ಕೊಬ್ಬರಿ ಸಂಗ್ರಹ ಕುರಿತಂತೆ ಮಾಹಿತಿ ಪಡೆದರು. ಈ ವೇಳೆ ಎಪಿಎಂಸಿ ಕಾರ್ಯದರ್ಶಿಯವರು,ಸರಕಾರ ಈ ಬಾರಿ ಮೊದಲ ಹಂತದಲ್ಲಿ ಸುಮಾರು ೧.೬೨ ಲಕ್ಷ ಮೆ.ಟನ್ ಕೊಬ್ಬರಿ ಮತ್ತು ಎರಡನೇ ಹಂತದಲ್ಲಿ ಸುಮಾರು ೧.೬೫ ಮೆ.ಟನ್ ಕೊಬ್ಬರಿ ಖರೀದಿಗೆ ಅವಕಾಶ ಕಲ್ಪಿಸಿತ್ತು.ಎರಡು ಸೇರಿ ಸುಮಾರು ೩.೨೦ ಲಕ್ಷ ಮೆ.ಟ.ಗೆ ಅವಕಾಶವಿತ್ತು.ಆದರೆ ಇದುವರೆಗೂ ಸುಮಾರು ೩ ಲಕ್ಷ ಮೆ.ಟನ್‌ಗೆ ರೈತರು ನೊಂದಾಯಿಸಿದ್ದಾರೆ.ಇಂದು ಸುಮಾರು ೧ ಸಾವಿರ ಟನ್‌ಗೆ ನೊಂದಣಿಯಾಗಿದೆ.ಆದರೆ ಕೊಬ್ಬರಿ ಬೆಳೆಗಾರರ ಬಳಿ ಇನ್ನೂ ಉತ್ಪನ್ನ ಇದೆ. ಕನಿಷ್ಠ ಹೆಚ್ಚುವರಿಯಾಗಿ ೨ ಲಕ್ಷ ಮೆ.ಟನ್‌ಗೆ ಅವಕಾಶ ನೀಡಿದರೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳ ಮಾಹಿತಿಯ ನಂತರ ಎಪಿಎಂಸಿಯಾರ್ಡ್‌ನಿಂದಲೇ ಕೇಂದ್ರದ ಕೃಷಿ ಉತ್ಪನ್ನ ಸಂಸ್ಕೃರಣಾ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು, ರೈತರು ಕೊಬ್ಬರಿ ಬೆಲೆ ಕುಸಿತದಿಂದ ಸಾಕಷ್ಟು ದಾಸ್ತಾನು ಇಟ್ಟುಕೊಂಡಿದ್ದಾರೆ.ಮೂರು ಲಕ್ಷ ಖರೀದಿಗೆ ನೊಂದಣಿಯಾಗಿದ್ದರೂ, ರೈತರು ಕ್ಯೂ ನಿಲ್ಲುವುದು ತಪ್ಪಿಲ್ಲ. ಹಾಗಾಗಿ ಹೆಚ್ಚುವರಿಯಾಗಿ ಮತ್ತೆ ಮೂರು ಲಕ್ಷ ಮೆ.ಟ.ಖರೀದಿಗೆ ಅವಕಾಶ ಮಾಡಿಕೊಡಬೇಕು.ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರ ಸಹ ಕೇಂದ್ರಕ್ಕೆ ಪತ್ರ ಬರೆದಿದ್ದು, ಇದನ್ನು ಪರಿಗಣಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಶಾಸಕರ ದೂರವಾಣಿ ಕೆರೆಗೆ ಉತ್ತರಿಸಿದ ಸಚಿವೆ ಶೋಭಾ ಕರಂದ್ಲಾಜೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ, ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.ಅಧಿಕಾರಿಗಳು ಕೊಬ್ಬರಿ ಮಾರಲು ನೊಂದಾಯಿಸಲು ಬರುವ ರೈತರನ್ನು ಹಿಂದಕ್ಕೆ ಕಳುಹಿಸದೆ ನೊಂದಾಣಿ ಮುಂದುವರೆಸುವಂತೆ ಮನವಿ ಮಾಡಿದರು.ಅಲ್ಲದೆ ಸ್ಥಳದಲ್ಲಿಯೇ ಮನವಿಯೊಂದನ್ನೂ ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದರು.