ತುಮಕೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ನಗರದ ಡಾ.ರಾಧಾಕೃಷ್ಣ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು, ಪಾದಾಚಾರಿಗಳು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಡಾ.ರಾಧಾಕೃಷ್ಣ ರಸ್ತೆಯನ್ನು ಅಭಿವೃದ್ಧಿಪಡಿಸಿ ಮೊದಲು ಪ್ರಾಯೋಗಿಕ ರಸ್ತೆಯಾಗಿ ಲೋಕಾರ್ಪಣೆ ಮಾಡಲಾಯಿತು. ರಸ್ತೆ ಅಭಿವೃದ್ಧಿಪಡಿಸುವಾಗ ಅಲ್ಲಿದ್ದ ಮರಗಳನ್ನು ಕಡಿಯಬಾರದೆಂದು ಪ್ರತಿಭಟನೆ ನಡೆಸಲಾಯಿತು. ಆಗ ಮರಗಳನ್ನು ಕಡಿಯದೆ ಹೇಗಿದೆಯೋ ಹಾಗೆ ಬೇರೆಡೆ ಸ್ಥಳಾಂತರಿಸಿ ರಸ್ತೆ ಅಭಿವೃದ್ಧಿಪಡಿಸಿ ಒಂದು ಬದಿ ವಾಹನ ನಿಲುಗಡೆ, ಇನ್ನೊಂದು ಬದಿ ವಾಹನ ಸಂಚಾರಕ್ಕೆ ಎಂದು ಹೇಳಿ ಎರಡು ಕಡೆ ರಸ್ತೆ ಅಭಿವೃದ್ಧಿಪಡಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ರಸ್ತೆಯ ಒಂದು ಬದಿ ವಾಹನಗಳನ್ನು ನಿಲ್ಲಿಸಬಾರದೆಂದು ನಗರದ ಟ್ರಾಫಿಕ್ ಪೊಲೀಸರು ದರ್ಪದಿಂದ ಸೂಚನಾ ಫಲಕಗಳನ್ನು ಅಳವಡಿಸಿ ರಸ್ತೆ ಬದಿ ವಾಹನ ನಿಲುಗಡೆ ಮಾಡದಂತೆ ಸೂಚಿಸಿದ್ದು ಏಕೋ ಏನೋ ತಿಳಿಯುತ್ತಿಲ್ಲ…
ಪೊಲೀಸರ ದರ್ಪ ಮುಂದುವರಿಕೆ: ಪೊಲೀಸರು ತಮ್ಮ ದರ್ಪ ಮುಂದುವರೆಸಿದ ಫಲವಾಗಿ ಉಪ್ಪಾರಹಳ್ಳಿ ಮೇಲ್ಸೇತುವೆ ಹಾಗೂ ಡಾ. ರಾಧಾಕೃಷ್ಣ ರಸ್ತೆ ಜನಸಾಮಾನ್ಯರ ಉಪಯೋಗಕ್ಕೆ ಬಾರದ ಹಾಗೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಬ್ಯಾರಿಕೇಡ್ ಅಳವಡಿಕೆ ಮಾಡಲು ಅದ್ಯಾವ ಅವಿವೇಕಿ ಅಧಿಕಾರಿ ಸೂಚಿಸಿದರೋ ತಿಳಿಯದು.
ಎಸ್.ಎಸ್. ಪುರಂ ಮುಖ್ಯ ರಸ್ತೆಯಿಂದ ಬರುವ ವಾಹನ ಸವಾರರು (ದ್ವಿಚಕ್ರ ವಾಹನ ಹೊರತುಪಡಿಸಿ) ಉಪ್ಪಾರಹಳ್ಳಿ ಹಾಗೂ ವಿಜಯನಗರಕ್ಕೆ ಹೋಗಬೇಕೆಂದರೆ ರೈಲ್ವೆ ಸ್ಟೇಷನ್ ರಸ್ತೆ ಮುಖಾಂತರವಾಗಿ ಡಿಡಿಪಿಐ ಕಚೇರಿ ಮಾರ್ಗವಾಗಿ (ಡಿಡಿಪಿಐ ಕಚೇರಿ ಮುಂಭಾಗ ಮೇಲ್ಸೇತುವೆಗೆ ಸಂಪರ್ಕ ಪಡೆಯಲು ಯುಟರ್ನ್ ಸೂಚನಾ ಫಲಕ ಅಳವಡಿಸಲಾಗಿದೆಯಾದರೂ ಅಲ್ಲಿ ಯು ಟರ್ನ್ ಮಾಡುವಂತಿಲ್ಲ ಎಂದು ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ) ಭದ್ರಮ್ಮ ಸರ್ಕಲ್ ಗೆ ಬಂದು ಅಲ್ಲಿಂದ ಮತ್ತೆ ಯು ಟರ್ನ್ ಪಡೆದು ಮೇಲ್ಸೇತುವೆ ಮುಖಾಂತರ ಉಪ್ಪಾರಹಳ್ಳಿ ಹಾಗೂ ವಿಜಯನಗರಕ್ಕೆ ಹೋಗಬೇಕಾಗಿದೆ. ಅದೇ ರೀತಿ ಮಾಜಿ ಸಂಸದ ಕೆ.ಲಕ್ಕಪ್ಪ ನವರ ಮನೆ ರಸ್ತೆ ಮುಖಾಂತರ ಬರುವ ವಾಹನ ಸವಾರರು ಸಹ ರೈಲ್ವೆ ಸ್ಟೇಷನ್ ರಸ್ತೆ ಮುಖಾಂತರ , ಡಿಡಿಪಿಐ ಕಚೇರಿ ಮುಂಭಾಗದಿಂದ ಭದ್ರಮ್ಮ ಸರ್ಕಲ್‌ನಲ್ಲಿ ಯು ಟರ್ನ್ ಪಡೆದು ಮೇಲ್ಸೇತುವೆ ಸಂಪರ್ಕ ಪಡೆಯಬೇಕಾಗಿದೆ.
ಉಪ್ಪಾರಹಳ್ಳಿ ಹಾಗೂ ವಿಜಯನಗರದಿಂದ ಮೇಲ್ಸೇತುವೆ ಮುಖಾಂತರ ಬರುವ ವಾಹನ ಸವಾರರು ರೈಲ್ವೆ ಸ್ಟೇಷನ್ ಕಡೆ ಹಾಗೂ ಎಸ್‌ಎಸ್ ಪುರಂ ಮುಖ್ಯ ರಸ್ತೆ ಕಡೆ ಚಲಿಸಲು ಅವಕಾಶ ಇಲ್ಲದಂತಾಗಿ ಆ ವಾಹನ ಸವಾರರು ಭದ್ರಮ್ಮ ಸರ್ಕಲ್ ಮುಖಾಂತರ ರೈಲ್ವೆ ಸ್ಟೇಷನ್ ಕಡೆ ಹಾಗೂ ಎಸ್‌ಎಸ್ ಪುರಂ ಕಡೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿ ಬಿಟ್ಟಿದ್ದಾರೆ.
ಕೆ.ಲಕ್ಕಪ್ಪ ನವರ ಮನೆ ಕಡೆಯಿಂದ ಬರುವಂತಹ ವಾಹನಗಳು ನೇರವಾಗಿ ಹೈ ಸ್ಕೂಲ್ ಫೀಲ್ಡ್ ಗೆ ಹೋಗಲು ಅವಕಾಶವಿಲ್ಲ. ಅವರು ಸಹ ರೈಲ್ವೆ ಸ್ಟೇಷನ್ ರಸ್ತೆಗೆ ಹೋಗಿ ಅಲ್ಲಿಂದ ಡಿಡಿಪಿಐ ಕಚೇರಿ ಮುಖಾಂತರ ಹೈಸ್ಕೂಲ್ ಫೀಲ್ಡ್ ಸೇರಬೇಕಾಗುತ್ತದೆ. ಇಷ್ಟೊಂದು ಅವಾಂತರ ಸೃಷ್ಟಿಸಲು ಕಾರಣವೇನೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನಸಾಮಾನ್ಯರಿಗೆ ತಿಳಿಸುವುದು ಅತ್ಯವಶ್ಯಕ.
ಸ್ಥಳೀಯ ನಾಗರೀಕರ ಪ್ರತಿಭಟನೆ ಫಲವಾಗಿ ಉಪ್ಪಾರಹಳಿ ಮೇಲ್ಸೇತುವೆ : ನಾಗರೀಕರ ಪ್ರತಿಭಟನೆ ಫಲವಾಗಿ ಉಪ್ಪಾರಹಳ್ಳಿ ಮೇಲ್ಸೇತುವೆ ನಿರ್ಮಾಣ ಮಾಡಲಾಯಿತು. ಈಗ ನೋಡಿದರೆ ಆ ಮೇಲ್ಸೇತುವೆ ಜನಸಾಮಾನ್ಯರ ಉಪಯೋಗಕ್ಕೆ ಬಾರದಂತಾಗಿದೆ.
ಓರ್ವ ಕಾನ್ ಸ್ಟೇಬಲ್ ಅಲ್ಲಿ ಪಾಯಿಂಟ್ ಡ್ಯೂಟಿ ಮಾಡಿದರೆ ಸಾಕು : ವಾಹನ ದಟ್ಟಣೆ ಸಮಯ ಗುರುತಿಸಿ ಓರ್ವ ಕಾನ್ ಸ್ಟೇಬಲ್ ಮೇಲ್ಸೇತುವೆ ಮುಂಭಾಗ ಪಾಯಿಂಟ್ ಡ್ಯೂಟಿ ಮಾಡಿದರೆ ಸಾಕು ಅಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದು ಸ್ಥಳೀಯರ ಮಾತು.
ಅಪಘಾತಗಳು ಸಂಭವಿಸುವುದು ಹೆಚ್ಚು : ಈಗಿನ ಪರಿಸ್ಥಿತಿಯಲ್ಲಿ ಕಿರಿದಾದ ರಸ್ತೆಯಲ್ಲಿ ಹಲವು ವಾಹನಗಳು ಒಂದೇ ಬಾರಿ ಚಲಿಸುವುದರಿಂದ ಅಪಘಾತಗಳು ಸಂಭವಿಸುವುದು ಹೆಚ್ಚು. ಇದಕ್ಕೆ ನೇರ ಹೊಣೆ ಪೊಲೀಸರೇ ಆಗುತ್ತಾರೆ ಎಂಬುದು ಸ್ಥಳೀಯರ ಆರೋಪ.
ಪೊಲೀಸರೇ… ಡಾ.ರಾಧಾಕೃಷ್ಣ ರಸ್ತೆಯನ್ನು ಮುಚ್ಚಿಬಿಡಿ : ಇಷ್ಟೆಲ್ಲ ಗೊಂದಲ ಮಾಡುವ ಬದಲು ಪೊಲೀಸರು ತಮ್ಮ ದರ್ಪದಿಂದ ಈ ರಸ್ತೆಯನ್ನೇ ಮುಚ್ಚಿ ಬಿಟ್ಟರೆ ಜನಸಾಮಾನ್ಯರು ವಾಹನ ಸವಾರರು ಬೇರೆ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂಬುದು ಸ್ಥಳೀಯರ ಆಕ್ರೋಶದ ನುಡಿಯಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿ ಹಲವು ಇಂಜಿನಿಯರ್ ಗಳು, ಪೊಲೀಸ್ ಅಧಿಕಾರಿಗಳು ಸಾಮಾಲೋಚಿಸಿ ಡಾ.ರಾಧಾಕೃಷ್ಣ ರಸ್ತೆ ಅಭಿವೃದ್ಧಿಪಡಿಸಿ ರಸ್ತೆ ಮುಖಾಂತರ ಮೇಲ್ಸೇತುವೆ, ಎಸ್.ಎಸ್. ಪುರಂ ಮುಖ್ಯ ರಸ್ತೆ ಹಾಗೂ ಹೈಸ್ಕೂಲ್ ಫೀಲ್ಡ್ ಗೆ ಹೋಗಲು ಸಂಪರ್ಕ ಕಲ್ಪಿಸಿದ್ದರು. ಆದರೆ ಈಗ ಪೊಲೀಸ್ ಅಧಿಕಾರಿಗಳು ಈ ಹಿಂದೆ ರೂಪಿಸಿದ ಯೋಜನೆಯನ್ನು ಬದಲಿಸಿ, ಇವರ ಇಷ್ಟ ಬಂದ ಹಾಗೆ ಯೋಜನೆ ರೂಪಿಸಿ ಜನಸಾಮಾನ್ಯರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ನಾಗರೀಕರು ದೂರುತ್ತಿದ್ದಾರೆ.
ಅಧಿಕಾರಿಗಳು ಬದಲಾದಂತೆ ಅವರ ಇಚ್ಛೆಗೆ ಅನುಗುಣವಾಗಿ ರಸ್ತೆ ಸಂಪರ್ಕಗಳನ್ನು ಬದಲಾಯಿಸಿರುವುದು ಎಷ್ಟು ಸರಿ… ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ಪ್ರಶ್ನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉತ್ತರಿಸಬೇಕು, ಇಲ್ಲವೇ ಸ್ಥಳೀಯ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಈ ಹಿಂದೆ ಡಾ.ರಾಧಾಕೃಷ್ಣ ರಸ್ತೆಯಲ್ಲಿ ಯಾವ ವ್ಯವಸ್ಥೆ ಇತ್ತೋ ಅದೇ ವ್ಯವಸ್ಥೆ ಮುಂದುವರೆಯುವಂತೆ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.