ಬ್ಲಾಕ್ ಮೇಲ್ ಟೀಂಗೆ ರಾಜೇಂದ್ರ ಹತ್ಯೆಗೆ ಸುಫಾರಿ ಕೊಟ್ಟವರು ಯಾರು..?

ತುಮಕೂರು- ತುಮಕೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರ ಕೊಲೆಗೆ ಸುಫಾರಿ ಪಡೆದ ಗ್ಯಾಂಗ್ ಈ ಹಿಂದೆ ಹಲವು ಮಂದಿ ಗಣ್ಯರನ್ನು ಬ್ಲಾಕ್ ಮೇಲ್ ಮಾಡಿ (ಖಾಸಗಿ ವಿಡಿಯೋಗಳನ್ನು ಮಾಡಿಕೊಂಡು) ಹಣ ವಸೂಲಿ ಮಾಡಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಪುಷ್ಪಾಬಾಯಿ (ಈ ಹಿಂದೆ ಡಿಡಿಪಿಐ ಕಚೇರಿ ಮುಂದೆ ಇರುವ ಮೇಲ್ಸೇತುವೆ ಕೆಳಭಾಗದಲ್ಲಿ ಟೀ ಅಂಗಡಿ ಇಟ್ಟಿದ್ದರು) ಹಾಗೂ ಸೋಮ ಇವರು ಮೊದಲಿನಿಂದಲೂ ನಗರದ ಗಣ್ಯ ವ್ಯಕ್ತಿಗಳು ಹಾಗೂ ಪಾಲಿಕೆ ಉಪಮೇಯರ್ ಆಗಿದ್ದ ಒಬ್ಬರನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದರು. ಇದರಲ್ಲಿ ಚಿನ್ನದ ವ್ಯಾಪಾರಿಯೋರ್ವ ಇವರ ಬ್ಲಾಕ್ ಮೇಲ್ ನಿಂದ ಚಿಂತೆಗೀಡಾಗಿ ಮೃತಪಟ್ಟಿದ್ದೂ ಹೌದು.

ಈ ಬ್ಲಾಕ್ ಮೇಲ್ ಟೀಂಗೆ ಎಂಎಲ್ಸಿ ರಾಜೇಂದ್ರ ಅವರ ಕೊಲೆಗೆ ಸುಫಾರಿ ಕೊಟ್ಟವರು ಯಾರು ಎಂಬುದೇ ನಿಗೂಢವಾಗಿದೆ.

ನಿಗೂಢವಾದರೂ ಇದು ಸತ್ಯ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರ ಪ್ರಕಾರ ಈ ಹುಡುಗರು ರಾಜೇಂದ್ರ ಅವರಿಗೆ ಮೊದಲಿನಿಂದಲೂ ಪರಿಚಯಸ್ಥರು. ಹೀಗಿರುವಾಗ ಇವರು ರಾಜೇಂದ್ರ ಅವರ ಕೊಲೆಗೆ ಸುಫಾರಿ ಪಡೆದಿದ್ದಾರೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಿದ ವಿಚಾರ ಕಳೆದ 2 ತಿಂಗಳ ಹಿಂದೆಯೇ ಕೆಲ ಪೊಲೀಸ್ ಅಧಿಕಾರಿಗಳಿಗೆ ತಿಳಿದಿದ್ದೂ ಉಂಟು.

ಈ ಬಗ್ಗೆ ಉನ್ನತ ಅಧಿಕಾರಿಗಳವರೆಗೆ ಮಾಹಿತಿಯೂ ರವಾನೆಯಾಯಿತಾದರೂ ದೂರೇ ಇಲ್ಲದ ಮೇಲೆ ನಮಗ್ಯಾಕೆ ಈ ಉಸಾಬರಿ ಎಂದು ಸುಮ್ಮನಾದರು.

ಈಗ ಖುದ್ದು ರಾಜೇಂದ್ರ ಅವರೇ ಕೊಲೆಗೆ ಸಂಚು ನಡೆದಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಎಸ್ಪಿ ರವರು ಜಿಲ್ಲೆಯ ಕೆಲ ಅಧಿಕಾರಿಗಳನ್ನು ತನಿಖೆ ನಡೆಸಲು ವಿಶೇಷ ತಂಡವಾಗಿ ರಚಿಸಿದ್ದಾರೆಯಾದರೂ ಇವರನ್ನು ಹೊರತುಪಡಿಸಿ ಬೇರೆ ಜಿಲ್ಲೆಯ ಕೆಲ ಅಧಿಕಾರಿಗಳನ್ನು ಈ ತನಿಖಾ ತಂಡದಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸದೆ ನಿಯೋಜಿಸಿಕೊಂಡಿರುವುದರಿಂದ ಈ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ. ಜಿಲ್ಲಾ ಎಸ್ಪಿಯವರು ಖುದ್ದು ತನಿಖಾ ತಂಡದೊಂದಿಗೆ ಇದ್ದು, ತನಿಖೆ ಮಾಡುತ್ತಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.