ತುಮಕೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ತುಮಕೂರು ಲೋಕಾಯುಕ್ತ ಪೊಲೀಸರು ಶಿರಾ ತಾಲೂಕು ತಾವರೆಕೆರೆ ವೈದ್ಯ ಜಗದೀಶ್ ರವರ ಮನೆ ಸೇರಿದಂತೆ ಆರು ಕಡೆ ದಾಳಿ ಮಾಡಿ ಚಿನ್ನ, ಬೆಳ್ಳಿ, ಆಸ್ತಿಯ ದಾಖಲಾತಿಗಳನ್ನು ವಶಪಡಿಸಿ ಕೊಂಡಿದ್ದಾರೆ.
ಗುರುವಾರ ಬೆಳ್ಳಂ ಬೆಳಗ್ಗೆ ಏಕಕಾಲದಲ್ಲಿ ಆರು ಕಡೆ ತುಮಕೂರು ಲೋಕಾಯುಕ್ತ ಎಸ್. ಪಿ.ಲಕ್ಷ್ಮಿ ನಾರಾಯಣ್, ಡಿ.ವೈ. ಎಸ್. ಪಿ. ರಾಮಕೃಷ್ಣ ಕೆ.ಜೆ. ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಶಿವರುದ್ರಪ್ಪ ಮೇಟಿ, ಸುರೇಶ್, ಸಲೀಂ, ರಾಜು, ಚಿತ್ರದುರ್ಗ ಲೋಕಾಯುಕ್ತ ಇನ್ಸ್ಪೆಕ್ಟರ್ ಗಳಾದ ಗುರು ಬಸವರಾಜು, ಬಸವರಾಜ್ ಹೊಸಮನಿ, ತುಮಕೂರು ಕಚೇರಿಯ ಸಿಬ್ಬಂದಿಗಳು ಹೋಗಿ ದಾಳಿ ನಡೆಸಿದರು.

ತುಮಕೂರಿನ ಮಂಜುನಾಥ ನಗರ ದ ವೈದ್ಯರ ಮನೆ ಮೇಲೆ ದಾಳಿ ಮಾಡಿ ದಾಖಲಾತಿಗಳನ್ನು ರಾತ್ರಿವರೆಗೂ ಪರಿಶೀಲಿಸಿ ಕೆಲವು ದಾಖಲಾತಿಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಒಂದು ಕೆಜಿ 300 ಗ್ರಾಂ ಚಿನ್ನ, ನಾಲ್ಕು ಕೆಜಿ 800 ಗ್ರಾಂ ಬೆಳ್ಳಿ, 1 ಲಕ್ಷ 13 ಸಾವಿರ ನಗದು, ಒಂದು ನಿವೇಶನ, 14 ಎಕರೆ ಜಮೀನು ದಾಖಲಾತಿ ವಶಪಡಿಸಿ ಕೊಂಡಿದ್ದಾರೆ.
ತುಮಕೂರಿನ 80 ಅಡಿ ರಸ್ತೆಯಲ್ಲಿ ಒಂದು ಕಾಂಪ್ಲೆಕ್ಸ್, ಮತ್ತೊಂದು ನಿವೇಶನ, ಯಲಪೇನ ಹಳ್ಳಿಯಲ್ಲಿ ಒಂದು ಫಾರಂ ಹೌಸ್, ಹಾಗೂ ಅಂಗಡಿ ಮಳಿಗೆಗಳು, ಮತ್ತು ಆಸ್ಪತ್ರೆ ಹೀಗೆ ಒಟ್ಟು ಆರು ಕಡೆ ದಾಳಿ ನಡೆಸಿದ್ದು ಹಲವು ದಾಖಲಾತಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ವೈದ್ಯ ಜಗದೀಶ್ ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.