ತುಮಕೂರು: ಕಳೆದ ವಿಧಾನಸಭಾ ಚುನಾವಣೆ ನಂತರ ಬಿಜೆಪಿ ಒಡನಾಟದಿಂದ ದೂರವಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಮರಳಿ ಬಿಜೆಪಿಗೆ ಸೇರ್ಪಡೆಯಾದರು.
ಶನಿವಾರ ಸಂಜೆ ನಗರದಲ್ಲಿ ನಡೆದ ದೇಶ ಭಕ್ತ ಸಮಾನ ಮನಸ್ಕ ಕಾರ್ಯಕರ್ತರ ಮಿಲನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಟಿ.ರವಿ ಅವರು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಸಮ್ಮುಖದಲ್ಲಿ ಸೊಗಡು ಶಿವಣ್ಣ ಅವರಿಗೆ ಪಕ್ಷದ ಶಾಲು ಹೊದಿಸಿ ಬಿಜೆಪಿಗೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಸಿ.ಟಿ.ರವಿ, ರಾಜಕಾರಣದಲ್ಲಿ ಕೆಟ್ಟ ಕಾಲ, ಒಳ್ಳೆಯ ಕಾಲ ಅಂತ ಇರುತ್ತದೆ. ಸೊಗಡು ಶಿವಣ್ಣನವರಿಗೆ ಕೆಟ್ಟ ಕಾಲ ಮುಗಿದು ಈಗ ಒಳ್ಳೆಯ ಕಾಲ ಬಂದಿದೆ, ಇನ್ನು ಮುಂದೆ ಇವರು ಪಕ್ಷ ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿ ಎಂದು ಶುಭ ಕೊರಿದರು.
ನೀವೆಲ್ಲಾ ಮೋದಿ ವಾರಿಯರ್ಸ್ ಆಗಿ ಸೈನಿಕರಂತೆ ದೇಶ ರಕ್ಷಣೆ ಮಾಡುವ ಸಂಕಲ್ಪ ಮಾಡಬೇಕು. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಾಂಬ್ ಇಡುವವರು, ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ಕಾಂಗ್ರೆಸ್ನವರ ಸೋದರರಂತೆ, ಭಾರತದ ಅನ್ನ ತಿಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವವರನ್ನು ಕಾಂಗ್ರೆಸ್ನವರು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ, ಇವರಿಂದ ದೇಶ ರಕ್ಷಣೆ ಸಾಧ್ಯವೆ? ಎಂದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಮುಂದಿನ ಜನ್ಮ ಅಂತ ಇದ್ದರೆ ನಾನು ಮುಸ್ಲೀಂ ಆಗಿ ಹುಟ್ಟಲು ಬಯಸುತ್ತೇನೆ ಎಂದು ಹೇಳಿದ್ದರು. ಮುಂದಿನ ಜನ್ಮದವರೆಗೂ ಯಾಕೆ ಕಾಯುವಿರಿ, ಈಗಲೇ ಆ ಧರ್ಮಕ್ಕೆ ಮತಾಂತರವಾಗಿರಿ ಯಾರು ಬೇಡ ಎಂದಿದ್ದಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಸೊಗಡು ಶಿವಣ್ಣ, ನಾನು ಹಳೆಯ ಗೆಳೆಯರು, ಪಕ್ಷಕ್ಕೆ ಇವರ ಕೊಡುಗೆ ಅಪಾರವಾಗಿದೆ. ಇವರು ಮತ್ತೆ ಬಿಜೆಪಿಗೆ ವಾಪಸ್ಸಾಗಿರುವುದು ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿ ನನ್ನನ್ನು ಗೆಲ್ಲಿಸಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ನಂತರ ತುಮಕೂರು ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ನಗರ, ಚುನಾವಣೆಯಲ್ಲಿ ಗೆದ್ದ ನಂತರ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಮುಖಂಡರಾದ ಬಿ.ಕೆ.ಮಂಜುನಾಥ್, ಸ್ಫೂರ್ತಿ ಚಿದಾನಂದ್, ಎಸ್.ಆರ್.ಶ್ರೀಧರಮೂರ್ತಿ, ಪಂಚಾಕ್ಷರಯ್ಯ, ಕೆ.ಎಸ್.ಸದಾಶಿವಯ್ಯ, ನಂಜೇಗೌಡ, ಕೆ.ಪಿ.ಮಹೇಶ್, ಡಿ.ಎಂ.ಸತೀಶ್, ಗೋಕುಲ ಮಂಜುನಾಥ್, ಪವನ್ಕುಮಾರ್, ಬನಶಂಕರಿ ಬಾಬು ಮತ್ತಿತರರು ಭಾಗವಹಿಸಿದ್ದರು.