ತುಮಕೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ ೧೧ ತಿಂಗಳಲ್ಲಿ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಜನರನ್ನು ಭಯದ ವಾತಾವರಣದಲ್ಲಿ ಬದುಕುವ ಧಾರುಣ ಸ್ಥಿತಿಗೆ ತಪುಪಿಸಿದೆ. ಪದೇಪದೆ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಸರ್ಕಾರದ ಅಸಮರ್ಥ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಹತೋಟಿಗೆ ತರಬೇಕೆಂಬ ಸಾಮರ್ಥ್ಯವೇ ಇಲ್ಲದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಒತ್ತಾಯಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷರು, ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಲಾಭದ ಹುನ್ನಾರ, ಮತ ಬ್ಯಾಂಕ್ ಸಂರಕ್ಷಣೆಯ ಕಾರಣಕ್ಕೆ ಹಿಂದೆ ಕಾನೂನು ಸುವ್ಯ ವಸ್ಥೆಗೆ ಹೆಸರಾಗಿದ್ದ ಕರ್ನಾಟಕ ರಾಜ್ಯವು ಇಂದು ಗೂಂಡಾ ರಾಜ್ಯವಾಗಿ ಮತ್ತು ಕೊಲೆಗಡುಕರ ರಾಜ್ಯವಾಗಿ ಪರಿವರ್ತನೆಗೊಂಡಿದೆ ಎಂದು ಹೇಳಿದ್ದಾರೆ.
ಸಿಟಿ ಕ್ರೈಮ್ ಬ್ಯೂರೋ ಮತ್ತು ನ್ಯಾಷನಲ್ ಕ್ರೈಮ್ ಬ್ಯೂರೋ ಅಂಕಿ ಆಂಶಗಳ ಪ್ರಕಾರ ಕಳೆದ ೧೧ ತಿಂಗಳಲ್ಲಿ ರಾಜ್ಯದಲ್ಲಿ ಶೇಕಡ ೬೦ಕ್ಕಿಂಥಾ ಹೆಚ್ಚು ಈ ತರಹದ ಕ್ರಿಮಿನಲ್ ಚಟುವಟಿಕೆ ಜಾಸ್ತಿಯಾಗಿರುವುದು ಕಂಡುಬಂದಿದೆ. ವಿಶೇಷವಾಗಿ ಮಹಿಳೆಯರ ಮೇಲಿನ ಅಮಾನುಷ ಕೃತ್ಯಗಳು ಜಾಸ್ತಿಯಾಗಿವೆ. ಇದಕ್ಕೆ ರಾಜ್ಯ ಸರ್ಕಾರವೇ ಪೂರ್ಣ ಕಾರಣ. ರಾಜ್ಯ ಸರ್ಕಾರ ದೃಢ ನಿರ್ಧಾರ, ಸೂಕ್ತ ಕ್ರಮ ತೆಗೆದುಕೊಳ್ಳದ ಕಾರಣ ಪದೇಪದೆ ಇಂತಹ ದುರ್ಘಟನೆಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯ ಅಂಜಲಿ ಹತ್ಯಾ ಪ್ರಕರಣ, ಅದಕ್ಕೂ ಮೊದಲು ನೇಹಾ ಪ್ರಕರಣ, ಬೆಳಗಾವಿಯಲ್ಲಿ ನಡೆದ ದಲಿತ ಮಹಿಳೆಯ ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ, ರೊಟ್ಟಿ ಕೇಳಿದ ದಲಿತ ಯುವಕನ ಹತ್ಯೆಯಂತಹ ದುಷ್ಕೃತ್ಯಗಳು ನಡೆದಿವೆ. ಒಂದು ಕಡೆ ಮತಾಂಧ ಶಕ್ತಿಗಳು ಸ್ವಚ್ಛಂದವಾಗಿ ವಿಜೃಂಭಿಸುತ್ತಿದ್ದರೆ ಇನ್ನೊಂದು ಕಡೆ ಕೊಲೆಗಡುಕರು ಹೆಚ್ಚಾಗಿ ಗೂಂಡಾ ರಾಜ್ಯವಾಗಿ ಕರ್ನಾಟಕ ಪರಿವರ್ತನೆಗೊಂಡಿದೆ. ಕಾಂಗ್ರೆಸ್ ಪಕ್ಷದ ಕೈಯ್ಯಲ್ಲಿ ರಾಜ್ಯ ಸುರಕ್ಷಿತವಾಗಿಲ್ಲ, ಕರ್ನಾಟಕವು ಅಪಾಯಕಾರಿ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸಲು ಅಸಮರ್ಥರಾಗಿರುವ ಗೃಹ ಸಚಿವ ಡಾ.ಪರಮೇಶ್ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಈ ಸಂಬಂಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದು ರವಿಶಂಕರ್ ಹೆಬ್ಬಾಕ ಹೇಳಿದ್ದಾರೆ.