ತುಮಕೂರು : ಜಿಲ್ಲೆಯ ೧೩೨೩೩೨ ರೈತರ ಖಾತೆಗೆ 74 ಕೋಟಿ ರೂ.ಗಳ ಬರ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ತಾಲೂಕು ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ೧೫೯೭೫ ರೈತರಿಗೆ ೯೨೮೨೩೨೮೩ ರೂ., ಗುಬ್ಬಿಯ ೮೨೩೪ ರೈತರಿಗೆ ೪೧೦೨೯೨೯೫ ರೂ., ಕೊರಟಗೆರೆ-೧೨೧೪೪ ರೈತರಿಗೆ ೭೨೮೧೩೯೨೫ ರೂ., ಕುಣಿಗಲ್-೧೯೦೨೨ ರೈತರಿಗೆ ೯೬೪೫೩೨೦೧ ರೂ., ಮಧುಗಿರಿ-೧೫೫೪೮ ರೈತರಿಗೆ ೮೯೭೮೩೧೯೫ ರೂ., ಪಾವಗಡ-೫೬೪೧ ರೈತರಿಗೆ ೪೨೫೮೩೫೬೧ ರೂ., ಶಿರಾ-೧೭೦೧೩ ರೈತರಿಗೆ ೧೧೧೯೨೮೨೩೭ ರೂ., ತಿಪಟೂರು-೧೪೯೫೫ ರೈತರಿಗೆ ೭೭೮೬೫೪೯೩ ರೂ., ತುಮಕೂರು-೧೧೦೦೪ ರೈತರಿಗೆ ೫೨೦೫೫೯೬೫ ರೂ. ಹಾಗೂ ತುರುವೇಕೆರೆ ತಾಲೂಕಿನ ೧೨೭೯೬ ರೈತರಿಗೆ ೬೪೮೦೯೭೯೬ ರೂ. ಸೇರಿದಂತೆ ೧೩೨೩೩೨ ರೈತರಿಗೆ ೭೪೨೧೪೫೯೫೧ ರೂ.ಗಳ ಬರ ಪರಿಹಾರವನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬರ ಪರಿಹಾರ ಹಣವನ್ನು ಖಾತೆಗೆ ಜಮೆ ಮಾಡಿದ ರೈತರ ಪಟ್ಟಿಯ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿ ಜಾಲತಾಣ, ಎಲ್ಲ ತಾಲೂಕು ಕಚೇರಿ, ಗ್ರಾಮ ಪಂಚಾಯತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚುರಪಡಿಸಬೇಕೆಂದು ಸೂಚನೆ ನೀಡಿದರು. ಖಾತೆಗೆ ಬರ ಪರಿಹಾರದ ಹಣ ಜಮೆಯಾಗದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಫ್ರೂಟ್ ಐಡಿ ಹಾಗೂ ಆಧಾರ್ ಸಂಖ್ಯೆಯೊಂದಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.
ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಮಸ್ಯೆಯ ಅಹವಾಲು ಸಲ್ಲಿಸಲು ಜಿಲ್ಲೆಯಲ್ಲಿ ಸ್ಥಾಪಿಸಿರುವ ೧೮ ಮೇವು ಬ್ಯಾಂಕುಗಳಲ್ಲಿಯೂ ಸಹಾಯವಾಣಿ ಕೇಂದ್ರವನ್ನು ತೆರೆಯಬೇಕು. ಸ್ವೀಕರಿಸಿದ ಅಹವಾಲುಗಳಿಗೆ ಅಧಿಕಾರಿಗಳು ಆದ್ಯತೆ ಮೇಲೆ ಸ್ಪಂದಿಸಿ ಪರಿಹರಿಸಲು ಕ್ರಮವಹಿಸಬೇಕೆಂದರಲ್ಲದೆ ಮೇವು ಬ್ಯಾಂಕಿಗೆ ಖರೀದಿಸಿದ ಮೇವಿನ ಬಿಲ್ ಮೊತ್ತವನ್ನು ಸರಬರಾಜುದಾರರಿಗೆ ಆದಷ್ಟು ಬೇಗ ಪಾವತಿಸಬೇಕೆಂದು ಸೂಚಿಸಿದರು.
ಆಶ್ರಯ ವಸತಿ ಯೋಜನೆ ಪ್ರಗತಿ ಪರಿಶೀಲಿಸಿದ ಅವರು ಜಿಲ್ಲೆಯಲ್ಲಿ ಆಶ್ರಯ ವಸತಿ ಯೋಜನೆಯಡಿ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಈಗಾಗಲೇ ಜಿಲ್ಲೆಯಲ್ಲಿ ೧೭೨೮-೧೯ ಎಕರೆ ಜಮೀನನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಂಜೂರಾತಿ ಆದೇಶ ನೀಡಲಾಗಿದ್ದು, ೧೧೯೯.೧೯ ಎಕರೆ ಪ್ರದೇಶವನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ. ಹಸ್ತಾಂತರವಾದ ಜಮೀನನ್ನು ಬಡಾವಣೆಗಳನ್ನಾಗಿ ನಿರ್ಮಿಸಲು ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಗರ ಯೋಜನಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.
ಆಧಾರ್ ಲಿಂಕಿಂಗ್/ಸೀಡಿಂಗ್, ಜನನ ಮತ್ತು ಮರಣ ಪ್ರಮಾಣ ಪತ್ರ, ಸಕಾಲ, ಭಗರ್ ಹುಕುಂ, ೩ ಮತ್ತು ೯ ತಿದ್ದುಪಡಿ, ಭೂಮಿ ಪೆಂಡೆನ್ಸಿ, ಭೂ ಪರಿವರ್ತನೆ, ಸಿ.ಎಂ. ಹಾಗೂ ಜಿಲ್ಲಾಧಿಕಾರಿಗಳ ಜನತಾದರ್ಶನ, ಅಭಿಲೇಖಾಲಯ ಡಿಜಿಟಲೀಕರಣ, ಲ್ಯಾಂಡ್ ಬೀಟ್, ಕಂದಾಯ ಗ್ರಾಮಗಳ ಪ್ರಗತಿ ಸಂಬಂಧಿಸಿದಂತೆ ಬಾಕಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಕಂದಾಯ ಪ್ರಗತಿಯಲ್ಲಿ ಜಿಲ್ಲೆಯನ್ನು ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ತರಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಭೂದಾಖಲೆಗಳ ಉಪನಿರ್ದೇಶಕ ನಿರಂಜನ್ ಎಂ.ಎನ್, ಜಿಲ್ಲೆಯ ಉಪವಿಭಾಗಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.