ಎಲೆ ರಾಂಪುರ ಗ್ರಾಪಂ ಪಿ ಡಿ ಓ ಹಾಗೂ ಅಧ್ಯಕ್ಷ ಲೋಕ ಬಲೆಗೆ

ತುಮಕೂರು: ಅಡಿಕೆ ಪಟ್ಟೆ ತಟ್ಟೆ ತಯಾರಿಸುವ ಕಾರ್ಖಾನೆಗೆ ಎನ್ ಓ ಸಿ  ನೀಡಲು 20 ಸಾವಿರ ರೂ ಲಂಚ ಪಡೆದ ಪಿಡಿಒ ಹಾಗೂ ಅಧ್ಯಕ್ಷರು, ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
 ಕೊರಟಗೆರೆ ತಾಲ್ಲೂಕ್ ಎಲೆ ರಾಂಪುರ ಗ್ರಾಮ ಪಂಚಾಯತಿಯ ಪಿ ಡಿ ಓ ಕಿಶೋರ್ ಲಾಲ್ ಸಿಂಗ್ ನಾಯಕ್, ಅಧ್ಯಕ್ಷ ಚಂದ್ರಶೇಖರ್ ಎಂಬುವವರೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು. ಈ ಪ್ರಕರಣದಲ್ಲಿ ಬಿಲ್ ಕಲೆಕ್ಟರ್ ಪಾತ್ರ ಇದೆಯೋ ಇಲ್ಲವೋ ಎಂಬುದು ದೃಢಪಟ್ಟಿಲ್ಲವೆನ್ನಲಾಗಿದೆ. ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಸಿಂಗರಹಳ್ಳಿ ನಾಗೇಶ್ ಎಂಬುವರು ಅಡಿಕೆ ಪಟ್ಟೆ ತಟ್ಟೆ ತಯಾರಿಸಲು ಗ್ರಾಮ ಪಂಚಾಯತಿಯಿಂದ ಎನ್ಓಸಿ ನೀಡಲು ಅರ್ಜಿ ಸಲ್ಲಿಸಿದ್ದರು. ಪಿಡಿಒ ಎನ್ ಓ ಸಿ ನೀಡಲು 20 ಸಾವಿರ ರೂ ಲಂಚ ಕೇಳಿದ್ದರು. ಇಂದು ಕಚೇರಿಯಲ್ಲಿ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ ಪಿ ವಲಿ ಸಾ ದೆಬ್ ನೇತೃತ್ವದಲ್ಲಿ ಡಿ ವೈ ಎಸ್ ಪಿ ಗಳಾದ ಉಮಾಶಂಕರ್, ಕೆಜೆ ರಾಮಕೃಷ್ಣ, ಇನ್ಸ್ಪೆಕ್ಟರ್ ಗಳು ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
ಎಲೆ ರಾಂಪುರ ಗ್ರಾಪಂ ಪಿ ಡಿ ಓ ಅಧ್ಯಕ್ಷ ಲೋಕ ಬಲೆಗೆ