ತುಮಕೂರು : ತುಮಕೂರು ವಿಭಾಗಕ್ಕೆ ೬ ಅಶ್ವಮೇಧ ಕ್ಲಾಸಿಕ್ ಮತ್ತು ೯ ಟಾಟಾ ಬಿ.ಎಸ್-೬ ಸೇರಿದಂತೆ ಒಟ್ಟು ೧೫ ನೂತನ ಬಸ್ಗಳನ್ನು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ|| ಜಿ. ಪರಮೇಶ್ವರ ಅವರಿಂದು ಲೋಕಾರ್ಪಣೆ ಮಾಡಿದರು.
ಲೋಕಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ತುಮಕೂರು ವಿಭಾಗವು ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾ ಕೇಂದ್ರವಾಗಿದ್ದು, ಜಿಲ್ಲೆಯಲ್ಲಿ ತುರುವೇಕೆರೆ, ತಿಪಟೂರು, ಶಿರಾ, ಮಧುಗಿರಿ, ಕುಣಿಗಲ್ಗಳಲ್ಲಿ ಹಾಗೂ ತುಮಕೂರು ನಗರವನ್ನೊಳಗೊಂಡಂತೆ ಒಟ್ಟಾರೆ ೭ ಘಟಕಗಳು ಕಾರ್ಯನಿರ್ವಹಿಸುತ್ತಿವೆ, ಒಟ್ಟು ೬೦೨ ವಾಹನಗಳ ಪೈಕಿ ೨೭೦ ಸಾಮಾನ್ಯ, ೨೯೯ ವೇಗದೂತ ಮತ್ತು ೩೩ ನಗರ ಸಾರಿಗೆಗಳು ಸಂಚರಿಸುತ್ತಿವೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಸುಮಾರು ೨೫೭೨ ಹಳ್ಳಿಗಳಿದ್ದು, ಇವುಗಳ ಪೈಕಿ ೩೯೧ ಹಳ್ಳಿಗಳು ರಾಷ್ಟ್ರೀಕೃತ ವಲಯದಲ್ಲಿದ್ದು, ಈ ಹಳ್ಳಿಗಳಿಗೆ ಹಾಗೂ ೨೧೮೧ ರಾಷ್ಟ್ರೀಕೃತವಲ್ಲದ ಹಳ್ಳಿಗಳಿಗೂ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ. ಕಾರ್ಯಾಚರಣೆಯ ವ್ಯಾಪ್ತಿಯು ತುಮಕೂರು-ಬೆಂಗಳೂರು, ಚಿತ್ರದುರ್ಗ, ಮೈಸೂರು, ಹಾಸನ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ ಇತ್ಯಾದಿ ಸ್ಥಳಗಳ ಜೊತೆಗೆ ಅಂತರ್ ರಾಜ್ಯದ ಸ್ಥಳಗಳಾದ ತಮಿಳುನಾಡಿನ ಕೊಯಂಬತ್ತೂರು ಹಾಗೂ ಆಂಧ್ರಪ್ರದೇಶದ ತಿರುಪತಿ & ಮಂತ್ರಾಲಯಗಳನ್ನು ಒಳಗೊಂಡಿರುತ್ತದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಸಂಸ್ಥೆಯಲ್ಲಿ ಪ್ರಯಾಣಿಕರಿಗೆ ಹಲವಾರು ರಿಯಾಯಿತಿ ಬಸ್ಪಾಸ್ಗಳನ್ನು ಹಾಗೂ ೨೦೨೨-೨೩ನೇ ಸಾಲಿನಲ್ಲಿ ೭೧೬೩೧ ವಿದ್ಯಾರ್ಥಿ ಬಸ್ ಪಾಸ್ಗಳನ್ನು ವಿತರಿಸಲಾಗಿದೆ. ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ಗಳನ್ನು, ಅಂಧರಿಗೆ ಮತ್ತು ಸ್ವಾತಂತ್ರ ಯೋಧರಿಗೆ ಉಚಿತ ಬಸ್ಪಾಸ್ಗಳನ್ನು ಮತ್ತು ಹಿರಿಯ ನಾಗರಿಕರಿಗೆ ಸಂಸ್ಥೆಯ ವಾಹನದಲ್ಲಿ ಶೇ.೨೫ರ? ರಿಯಾಯಿತಿಯನ್ನು ನೀಡಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದ್ದು, ನಗರ ಸಾರಿಗೆ, ಸಾಮಾನ್ಯ ವೇಗದೂತ ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ, ಜೂನ್ ೧೧, ೨೦೨೩ರಿಂದ ಪ್ರಾರಂಭವಾದ ಶಕ್ತಿ ಯೋಜನೆಯಡಿಯಲ್ಲಿ ಪ್ರಸಕ್ತ ಫೆಬ್ರವರಿ ೨೦೨೪ ಮಾಹೆವರೆಗೆ ೪೮೫.೦೧ ಲಕ್ಷ ಮಹಿಳಾ ಪ್ರಯಾಣಿಕರು ತುಮಕೂರು ಹಾಗೂ ರಾಜ್ಯದ ಇತರೆ ಸ್ಥಳಗಳಿಗೆ ಪ್ರಯಾಣಿಸಿದ್ದು, ಇದರಿಂದ ತುಮಕೂರು ವಿಭಾಗಕ್ಕೆ ೧೩೯೮೭.೩೧ ಲಕ್ಷ ರೂ. ಆದಾಯ ಗಳಿಸಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆಯಡಿ ಅಂದಾಜು ೮೨.೮೯ ಕೋಟಿ ರೂ.ಮೊತ್ತದಲ್ಲಿ ನಿರ್ಮಾಣಗೊಂಡಿರುವ ಮೊದಲ ಹಂತದ ಕಾಮಗಾರಿ ಡಿ.ದೇವರಾಜು ಅರಸು ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ ೨೯ರಂದು ಉದ್ಘಾಟಿಸಿದ್ದು, ಉಳಿದ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಶ್ರೀನಿವಾಸ್ ನೂತನ ಬಸ್ ಚಾಲನೆ ಮಾಡಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ.ಕರಾಳೆ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮರಿಯಪ್ಪ, ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ., ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ತಹಶೀಲ್ದಾರ್ ಸಿದ್ದೇಶ್ ಎಮ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.