ತುಮಕೂರು: ಬೆಳ್ಳಂಬೆಳಗ್ಗೆ ತುಮಕೂರು ಲೋಕಾಯುಕ್ತ ಪೊಲೀಸರು ವೈದ್ಯ ಡಾ. ಜಗದೀಶ್ ರವರ ಮನೆ ಸೇರಿದಂತೆ ಒಟ್ಟು ಆರು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಸಿರಾ ತಾಲೂಕು ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿರುವ ಡಾ. ಜಗದೀಶ್ ರವರ ತುಮಕೂರಿನ ಬಟವಾಡಿ ಬಳಿಯ ಮನೆ, ಶಿರಾ ತಾಲೂಕಿನ ಫಾರಂ ಹೌಸ್ ಸೇರಿದಂತೆ ಆರು ಕಡೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.
ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಹಿನ್ನೆಲೆಯಲ್ಲಿ ಎರಡನೇ ಬಾರಿ ಈ ದಾಳಿ ನಡೆದಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದು ಬಂದಿದೆ.
ತುಮಕೂರು ಲೋಕಾಯುಕ್ತ ಎಸ್. ಪಿ. ಲಕ್ಷ್ಮೀನಾರಾಯಣ್ ರವರ ನೇತೃತ್ವದಲ್ಲಿ ಡಿ. ವೈ. ಎಸ್. ಪಿ. ರಾಮಕೃಷ್ಣ ಕೆ. ಜಿ. ಇನ್ಸ್ಪೆಕ್ಟರ್ಗಳಾದ ಶಿವರುದ್ರಪ್ಪ ಮೇಟಿ, ಸುರೇಶ್, ಸಲೀಂ, ಮತ್ತು ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡು ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸಂಜೆ ವೇಳೆಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸುವೆ.