ತುಮಕೂರು : ಜಿಲ್ಲೆಯಲ್ಲಿ ಈವರೆಗೂ ೧೫ ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದ್ದು, ರೈತರ ಬೇಡಿಕೆಗನುಗುಣವಾಗಿ ಹೊಸ ಮೇವು ಬ್ಯಾಂಕ್‌ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿಗೆ ಮಂಗಳವಾರ ಭೇಟಿ ನೀಡಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಬಳಿಯಿರುವ ಮೇವು ಬ್ಯಾಂಕನ್ನು ಅವರು ಪರಿಶೀಲಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಮೇ ೨ ರಿಂದ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಆದರೆ ಕೊರಟಗೆರೆ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿರುವುದರಿಂದ ಜಾನುವಾರುಗಳ ಮೇವು, ರೈತರ ಸಮಸ್ಯೆ, ನೀರಿನ ಸಮಸ್ಯೆಯನ್ನು ಅರಿತು ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಕೊರಟಗೆರೆ ತಾಲ್ಲೂಕಿಗಿಂದು ಭೇಟಿ ನೀಡಲಾಗಿದೆ ಎಂದು ತಿಳಿಸಿದರು.
ಮೇವು ಬ್ಯಾಂಕಿನಲ್ಲಿ ಪ್ರತಿ ಕೆ.ಜಿ. ಮೇವಿಗೆ ೨ ರೂ.ನಂತೆ ವಿತರಣೆ ಮಾಡಲಾಗುತ್ತಿದ್ದು, ರಾಜ್ಯ ವಿಕೋಪ ನಿರ್ವಹಣಾ ನಿಧಿಯನ್ನು ಬಳಸಿ ರಿಯಾಯತಿ ದರದಲ್ಲಿ ಜಾನುವಾರುಗಳ ಮೇವನ್ನು ವ್ಯವಸ್ಥಿತವಾಗಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಮೇವು ಉತ್ಪಾದನೆಯಾಗುವ ನಿರೀಕ್ಷೆಯಾಗಿದ್ದು, ಮೇವಿನ ಕೊರತೆ ಸುಧಾರಿಸುವವರೆಗೂ ಬೇಡಿಕೆಗನುಗುಣವಾಗಿ ಮೇವು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತವೆ. ಕಳಪೆ ಗುಣಮಟ್ಟದಿಂದ ಕೂಡಿದ ಮೇವನ್ನು ವಾಪಸ್ಸು ಕಳುಹಿಸಲಾಗುತ್ತಿದೆ. ರೈತರಿಂದ ಬೇಡಿಕೆ ಬಂದ ಪ್ರದೇಶಗಳಲ್ಲಿ ತುರ್ತಾಗಿ ಮೇವು ಬ್ಯಾಂಕ್ ಪ್ರಾರಂಭಿಸಲು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಳೆಗಾಲ ಪ್ರಾರಂಭವಾಗಿರುವುದರಿಂದ ರೈತರು ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಭೂಮಿಯನ್ನು ಉಳುಮೆ ಮಾಡಿ ಬೀಜ ಬಿತ್ತನೆ ಮಾಡಲು ಅಣಿಯಾಗುತ್ತಿದ್ದಾರೆ. ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ. ರಿಯಾಯತಿ ದರದಲ್ಲಿ ಬೀಜ ರೈತರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೀರಿನ ಸಮಸ್ಯೆ ಇರುವ ಕಡೆ ತುರ್ತಾಗಿ ಹೊಸ ಕೊಳವೆಬಾವಿ ಕೊರೆಯಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರಲ್ಲದೆ ಕೊರಟಗೆರೆ ತಾಲ್ಲೂಕಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಟ್ಯಾಂಕರ್‌ಗಳ ಮೂಲಕ, ಖಾಸಗಿ ಕೊಳವೆ ಬಾವಿಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಹೊಸ ಕೊಳವೆಬಾವಿ ಕೊರೆದು ನೀರು ಪೂರೈಕೆಗೆ ಕ್ರಮ ವಹಿಸಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತ/ ಅವಘಡ ಉಂಟಾದರೆ ತುರ್ತಾಗಿ ಕ್ರಮಕೈಗೊಳ್ಳಲು ಬೆಸ್ಕಾಂಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರಲ್ಲದೆ ಬರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರು ತಾಲ್ಲೂಕು ಕಚೇರಿಗೆ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸಹಾಯವಾಣಿ ಸಂಖ್ಯೆ ೨೪*೭ ಕಾರ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.
ಬರಗಾಲ ಇರುವುದರಿಂದ ಯಾವುದೇ ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಮರುಪಾವತಿಸಲು ಕಿರುಕುಳ ನೀಡಿದಲ್ಲಿ ಸಹಾಯವಾಣಿ ಸಂಖ್ಯೆ ೧೧೨ಗೆ ಕರೆ ಮಾಡಿ ದೂರು ನೀಡಬೇಕು. ಹಣ ಮರುಪಾವತಿಸಲು ಶಕ್ತಿ ಇಲ್ಲದವರಿಗೆ ಮೈಕ್ರೋ ಫೈನಾನ್ಸ್‌ಗಳು ಸಾಲ ನೀಡಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇದರಿಂದ ಆತ್ಮಹತ್ಯೆ ಪ್ರಕಣಗಳು ಹೆಚ್ಚಾಗುತ್ತಿವೆ. ಸಾಲ ಮರು ಪಾವತಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಕ್ಷೇತ್ರಾಧಿಕಾರಿಗಳನ್ನು ದಸ್ತಗಿರಿ ಮಾಡಲು ಪೊಲೀಸ್ ಇಲಾಖೆ ಕ್ರಮವಹಿಸಲಿದೆ ಎಂದು ತಿಳಿಸಿದರು.
ಕೆರೆಯ ಮಣ್ಣನ್ನು ತೆಗೆಯಲು ಹೇರಿರುವ ನಿರ್ಬಂಧವನ್ನು ಹಿಂಪಡೆಯಬೇಕೆಂದು ಪತ್ರಕರ್ತರು ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕೆರೆಯ ಮಣ್ಣನ್ನು ತೆಗೆಯುವುದರಿಂದ ಮಳೆ ನೀರು ಸಂಗ್ರಹವಾಗದೆ ನೀರೆಲ್ಲ ಇಂಗಿ ಹೋಗುತ್ತದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟಾಗುವುದನ್ನು ತಡೆಯಲು ಅವೈಜ್ಞಾನಿಕವಾಗಿ ಮಣ್ಣು ತೆಗೆಯುವುದನ್ನು ನಿಯಂತ್ರಿಸುವ ಸಲುವಾಗಿ ನಿರ್ಬಂಧವನ್ನು ಹೇರಲಾಗಿದೆ ಎಂದು ತಿಳಿಸಿದರು.
ವ್ಯವಸಾಯದ ಹೆಸರಿನಲ್ಲಿ ಕೋಳಿ ಫಾರಂ ತೆರೆ ಗ್ರಾಮದ ನೈರ್ಮಲ್ಯವನ್ನು ಹಾಳು ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪತ್ರಕರ್ತರು ದೂರು ನೀಡಿದಾಗ ಪಂಚಾಯತಿಗಳು ಕೋಳಿ ಫಾರಂ ತೆರೆದು ಅಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ಪಂಚಾಯಿತಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕಿನ ಕೋಳಾಲ, ಹೊಳವನಹಳ್ಳಿಯಲ್ಲಿ ಹೊಸದಾಗಿ ಮೇವು ಬ್ಯಾಂಕನ್ನು ತೆರೆಯಬೇಕೆಂದು ರೈತರು ಮನವಿ ಮಾಡಿದರು.
ಬುಕ್ಕಪಟ್ಟಣ ಮೇವು ಬ್ಯಾಂಕ್ ಭೇಟಿ : ಇದಕ್ಕೂ ಮುನ್ನ ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗ ಹೋಬಳಿ ಬುಕ್ಕಪಟ್ಟಣದ ದೊಡ್ಡಮ್ಮದೇವಿ ದೇವಸ್ಥಾನದ ಬಳಿ ತೆರೆದಿರುವ ಮೇವು ಬ್ಯಾಂಕಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಮೇವು ಸಮರ್ಪಕ ವಿತರಣೆಯಾಗುತ್ತಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದರು. ರೈತರು ಟೋಕನ್ ಪಡೆದು ಸಾಲಿನಲ್ಲಿ ನಿಂತು ಮೇವು ಪಡೆಯುತ್ತಿರುವುದನ್ನು ಗಮನಿಸಿ ಮಾತನಾಡಿದ ಅವರು, ಮೇವಿಗಾಗಿ ರೈತರ ಸಂಖ್ಯೆ ಹೆಚ್ಚಾದಲ್ಲಿ ವಿತರಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಚ್ಛತೆ ಕಾಪಾಡಲು ಸೂಚನೆ : ನಂತರ ಬುಕ್ಕಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಹೊರ ರೋಗಿ ನೋಂದಣಿ ದಾಖಲಾತಿ ಪುಸ್ತಕ, ಪುರುಷರ ವಾರ್ಡ್ ಹಾಗೂ ಮಹಿಳೆಯರ ವಾರ್ಡನ್ನು ಪರಿಶೀಲಸಿದ ಅವರು, ಮಹಿಳಾ ವಾರ್ಡಿನಲ್ಲಿ ಸ್ವಚ್ಛತೆ ಕಾಪಾಡದೇ ಇರುವುದನ್ನು ಕಂಡು ಸಿರಿಂಜ್, ಬಾಟಲಿ ಸೇರಿದಂತೆ ಮತ್ತಿತರ ಆಸ್ಪತ್ರೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ನನಗೋಸ್ಕರ ಕೆಲಸ ಮಾಡಬೇಡಿ. ರೋಗಿಗಳ ಮೇಲೆ ಕಾಳಜಿ ಹೊಂದಿರಬೇಕು. ರೋಗಿಗಳಿಗಾಗಿಯೇ ನಿಮ್ಮ ಸೇವೆಯನ್ನು ಮುಡುಪಾಗಿಡಿ ಎಂದು ಗ್ರೂಪ್ ಡಿ ನೌಕರರಿಗೆ ಎಚ್ಚರಿಕೆ ನೀಡಿದರು.
ಬೋವಿ ಕಾಲೋನಿಯಲ್ಲಿ ನೀರಿನ ಸಮಸ್ಯೆ : ಕೊರಟಗೆರೆ ಪಟ್ಟಣ ಪಂಚಾಯತಿ ವ್ಯಾಪ್ತಿ ಬೋವಿ ಕಾಲೋನಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಅಹವಾಲುಗಳನ್ನು ಆಲಿಸಿದರು. ಸ್ಥಳೀಯರು ೧೫ ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿರುವುದರಿಂದ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಯಾವ ಅಧಿಕಾರಿಗಳಿಗೂ ನಮ್ಮ ಮೇಲೆ ಕರುಣೆ ತೋರುತ್ತಿಲ್ಲವೆಂದು ದೂರು ನೀಡಿದಾಗ ಕೂಡಲೇ ಹೊಸ ಕೊಳವೆ ಬಾವಿ ಕೊರೆಸಲು ಕ್ರಮಕೈಗೊಳ್ಳಬೇಕೆಂದು ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ನಂತರ ಹೊಳವನಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ದಾಸ್ತಾನು ಇರುವ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಮತ್ತಿತರ ಕೃಷಿ ಪರಿಕರಗಳ ದಾಸ್ತಾನು ಸೇರಿದಂತೆ ದಾಸ್ತಾನು ವಹಿ ಹಾಗೂ ವಿತರಣಾ ವಹಿಯನ್ನು ಪರಿಶೀಲಿಸಿದ ಅವರು, ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ್, ಆಯುಷ್ ವೈದ್ಯಾಧಿಕಾರಿ ಡಾ|| ಆತ್ಮಾರಾಮ್ ಎಂ ಶೆಟ್ಟಿ. ಬಿ. ಉಪ ತಹಶೀಲ್ದಾರ್ ಅನಿತಾ, ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.