ತುಮಕೂರು – ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಪೊಲೀಸ್ ರನ್-5ಕೆ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಯಂತ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರದ ಬಿ.ಹೆಚ್. ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ಕವಾಯತು ಮೈದಾನದಿಂದ ಆರಂಭವಾದ ಪೊಲೀಸ್ ರನ್-5ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ನ್ಯಾಯಾಧೀಶರಾದ ಜಯಂತ್ ಅವರು ಮಾತನಾಡಿ, ಕರ್ನಾಟಕ ಪೊಲೀಸ್ ಇಲಾಖೆ 50 ವರ್ಷ ಪೂರೈಸಿದ ಸುಸಂದರ್ಭದಲ್ಲಿ ರನ್-5ಕೆ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಪ್ರತಿದಿನ ಒಂದಿಲ್ಲೊಂದು ಅಪರಾಧ ಪ್ರಕರಣಗಳ ತನಿಖೆಯಲ್ಲಿ ಬ್ಯುಸಿಯಾಗಿರುವ ಪೊಲೀಸರಿಗೆ ಈ ರನ್-5ಕೆ ಉತ್ತಮ ಕಾರ್ಯಕ್ರಮವಾಗಿದೆ. ಪೂರ್ಣ ಮನಸ್ಸಿನಿಂದ ಪೊಲೀಸರು ಭಾಗವಹಿಸಿರುವುದು ಕಂಡು ಬರುತ್ತಿದೆ ಎಂದರು.
ಪೊಲೀಸರು ಎಲ್ಲಿ ಆರಾಮವಾಗಿದ್ದಾರೆ ಅಂತಹ ಕಡೆ ಯಾವುದೇ ರೀತಿಯ ಅಪರಾಧ ಪ್ರಕರಣಗಳು, ಸಮಾಜ ಘಾತುಕ ಚಟುವಟಿಕೆಗಳು ಇಲ್ಲದೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ ಎಂದರ್ಥ. ಹಾಗಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಬೇಕು ಎಂದರು.
50 ವರ್ಷ ಪೂರೈಸಿರುವ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಅವರು, ಸಮಾಜ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಪೊಲೀಸ್ ಇಲಾಖೆ ಪ್ರತಿದಿನವೂ ಶಿಸ್ತು, ಕರ್ತವ್ಯ ಪಾಲನೆಗೆ ಹೆಸರಾಗಿದೆ. ಇಲಾಖೆ 50 ವರ್ಷ ಪೂರೈಸಿರುವ ಈ ಸುಸಂದರ್ಭದಲ್ಲಿ ರನ್-5ಕೆ ಆಯೋಜಿಸುವ ಮೂಲಕ ಸಮಾಜದಲ್ಲಿ ಶಿಸ್ತು ಕಾಪಾಡುವ ಸಂದೇಶವನ್ನು ಸಾರಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ಕವಾಯತು ಮೈದಾನದಿಂದ ಆರಂಭವಾದ ರನ್-5ಕೆ ಬಿ.ಹೆಚ್. ರಸ್ತೆ ಮೂಲಕ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ, ಭದ್ರಮ್ಮ ವೃತ್ತ, ಟೌನ್ಹಾಲ್, ಕೆ. ಲಕ್ಕಪ್ಪವೃತ್ತದ ಮೂಲಕ ಸಾಗಿ ಮಂಡಿಪೇಟೆ, ಚರ್ಚ್ ಸರ್ಕಲ್ ಮುಖೇನ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಮುಕ್ತಾಯಗೊಂಡಿತು.
ರನ್-5ಕೆಯಲ್ಲಿ ಕೆ.ಎಸ್.ಆರ್.ಪಿ 12ನೇ ತುಕುಡಿ, ಡಿ.ಎ.ಆರ್, ನಗರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು, 4ನೇ ಕರ್ನಾಟಕ ಎನ್.ಸಿ.ಸಿ ವಿದ್ಯಾರ್ಥಿಗಳು, ವಿದ್ಯಾವಾಹಿನಿ ಸಂಸ್ಥೆ, ಎಸ್.ಎಸ್.ಐ.ಟಿ, ಸಿದ್ದಗಂಗಾ ಕಾಲೇಜು, ಸರ್ವೋದಯ ಕಾಲೇಜು, ಜಿಲ್ಲಾ ಕ್ರೀಡಾ ಶಾಲೆ, ವಿವೇಕಾನಂದ ರೈಫಲ್ ಸಂಸ್ಥೆ, ವಿದ್ಯೂದಯ ಕಾನೂನು ಕಾಲೇಜು, ಎಸ್.ಐ.ಟಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ 5 ಕಿ.ಲೋ.ಮೀಟರ್ ಓಟದಲ್ಲಿ ಕುಣಿಗಲ್ನ ಜಿ.ಎಫ್.ಜಿ.ಸಿ. ಚಿಕ್ಕಣ್ಣ ಪಥಮ ಸ್ಥಾನ ಪಡೆದುಕೊಂಡರು
ಇದೇ ಸಂದರ್ಭದಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕಣ್ಣ ಅವರಿಗೆ ನ್ಯಾಯಾಧೀಶರು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳಾದ ರಾಮಲಿಂಗೇಗೌಡ, ಮುನಿರಾಜು, ನಾಗರೆಡ್ಡಿ, ಸುಬ್ರಹ್ಮಣ್ಯ, ಮಂಜುನಾಥ್, ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಖಾದರ್, ಡಿವೈಎಸ್ಪಿ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.