ತುಮಕೂರು- ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ಕಾರ್ಡ್ನಲ್ಲಿ ಕೆಲಸ ಮಾಡಿದ್ದ ಕಾರ್ಮಿಕರ ಕೂಲಿ ಹಣ ಮಂಜೂರು ಮಾಡಲು ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದ ಸಿರಾ ತಾಲ್ಲೂಕು ರಾಮಲಿಂಗಾಪುರ ಗ್ರಾ.ಪಂ. ಪಿಡಿಓಗೆ ಇಲ್ಲಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸಿರಾ ತಾಲ್ಲೂಕು ರಾಮಲಿಂಗಾಪುರ ಗ್ರಾ.ಪಂ. ಪಿಡಿಓ ಓಂಕಾರಪ್ಪ ಎಂಬುವರೇ ಲಂಚ ಪಡೆದು ಶಿಕ್ಷೆಗೆ ಗುರಿಯಾಗಿರುವ ಅಧಿಕಾರಿ.
ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ಜಾನಕಲ್ ಗ್ರಾಮದ ವಾಸಿ ಕೋದಂಡರಾಮು ಎಂಬುರ ತಾಯಿ ಕೃಷ್ಣಮ್ಮರವರ ಹೆಸರಿನಲ್ಲಿರುವ ಜಾನಕಲ್ ಗ್ರಾಮದ ಸರ್ವೆ ನಂ. 53/4ರ ಜಮೀನಿಗೆ ರಾಮಲಿಂಗಾಪುರ ಗ್ರಾಮ ಪಂಚಾಯ್ತಿಯಿಂದ ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣದ ಕಾಮಗಾರಿ ಮಂಜೂರಾಗಿತ್ತು. ಈ ಕಾಮಗಾರಿಯಲ್ಲಿ ಜಾಬ್ಕಾರ್ಡ್ನಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಹಣ 43,550 ರೂ. ಹಾಗೂ ಮೆಟೀರಿಯಲ್ ಖರ್ಚಿನ ಹಣ 6448 ರೂ. ಸೇರಿ ಒಟ್ಟು 50 ಸಾವಿರ ರೂ.ಗಳನ್ನು ಮಂಜೂರು ಮಾಡಲು ಆರೋಪಿ ಪಿಡಿಓ ಓಂಕಾರಪ್ಪ 1 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಮುಂಗಡವಾಗಿ 500 ರೂ. ವಂಚದ ಹಣವನ್ನು ಪಡೆದಿದ್ದರು.
ಲಂಚದ ಹಣ ನೀಡಲು ಇಷ್ಟವಿಲ್ಲದೆ ಕೋದಂಡರಾಮು ಅವರು 2020ರ ಸೆ. 21 ರಂದು ತುಮಕೂರು ಎಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎಸಿಬಿ ಡಿವೈಎಸ್ಪಿ ಬಿ.ಉಮಾಶಂಕರ್ ರವರು ಪ್ರಕರಣ ದಾಖಲಿಸಿ 2020ರ ಸೆ. 22 ರಂದು ಸಿರಾ ನಗರದ ಹಳೇ ತಾಲ್ಲೂಕು ಕಚೇರಿ ಮುಂಭಾಗ 1 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿ ಪಿಡಿಓ ಓಂಕಾರಪ್ಪನನ್ನು ಬಂಧಿಸಿದ್ದರು.
ಭ್ರಷ್ಟಾಚಾರ ನಿಗ್ರಹ ದಳ ರದ್ದುಗೊಂಡ ನಂತರ ಲೋಕಾಯುಕ್ತ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅವರು ಆರೋಪಿ ಪಿಡಿಓಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ, 5 ಸಾವಿರ ರೂ. ದಂಡ ಹಾಗ ದಂಡ ಕಟ್ಟಲು ವಿಫಲವಾದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕರಾದ ಎನ್.ಬಿ. ಬಸವರಾಜು ವಾದ ಮಂಡಿಸಿದ್ದರು.