ತುಮಕೂರು: ಸಮಸ್ಯೆ ಹೊತ್ತು ಪೋಲಿಸ್ ಠಾಣೆಗಳಿಗೆ ಬರುವ ಜನರನ್ನು ಗೌರವದಿಂದ ಮಾತನಾಡಿಸಿ “ಜನಸ್ನೇಹಿ” ಪೊಲೀಸ್ ಆಗಿ ಕೆಲಸ ಮಾಡ ಬೇಕೆಂದು ಕೇಂದ್ರ ವಲಯ ಐ ಜಿ ಪಿ. ಲಾಬು ರಾಮ್ ತಿಳಿಸಿದರು.
ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಪರಾಧಗಳನ್ನು ನಿಯಂತ್ರಿಸಲು, ಸಂಚಾರಿ ವ್ಯವಸ್ಥೆ ಸರಿಪಡಿಸಲು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ಹೊರ ರಾಜ್ಯ ಗಡಿಭಾಗದ ಪಾವಗಡ ತಾಲೂಕಿನಲ್ಲಿ ಬಂದು ಅಪರಾಧ ಕೃತ್ಯ ನಡೆಸುವ ಮಂದಿಯ ಬಗ್ಗೆಯೂ ಎಚ್ಚರದಿಂದ ಇರಬೇಕೆಂದು ಹೇಳಿದರು.
ಸಮಸ್ಯೆ ಇರುವವರಷ್ಟೇ ಪೊಲೀಸ್ ಠಾಣೆಗಳಿಗೆ ಬರುವುದು, ಸಮಸ್ಯೆ ಇಲ್ಲದವರು ಪೊಲೀಸ್ ಠಾಣೆಗಳತ್ತ ಸುಳಿಯುವುದಿಲ್ಲ, ಠಾಣೆ ಅಧಿಕಾರಿಗಳು ನೊಂದವರ ನೋವನ್ನು ಅರ್ಥ ಮಾಡಿಕೊಂಡು ಸರಿಯಾಗಿ ಕೆಲಸ ನಿರ್ವಹಿಸಬೇಕು. ಆ ರೀತಿ ಕೆಲಸ ಮಾಡಿದರೆ ತುಮಕೂರು ಜಿಲ್ಲಾ ಪೊಲೀಸ್ ಕಚೇರಿ, ಬೆಂಗಳೂರು ಐಜಿ ಕಚೇರಿಗೆ ಜನರು ಬರುವುದು ತಪ್ಪುತ್ತದೆ. ಪೊಲೀಸ್ ಠಾಣೆಗಳಿಗೆ ಸುಮ್ಮನೆ ದೂರುದಾರರನ್ನು ಅಲೆಸಬಾರದು, ಅಂತಹ ದೂರು ಗಳೇನಾದರೂ ಬಂದಲ್ಲಿ ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮ ಕಟ್ಟಿಟ್ಟ ಬುತ್ತಿ ಎಂದರು.
ಸಭೆಯ ನಂತರ ಐಜಿಪಿ ಮತ್ತು ಎಸ್ ಪಿ, ಡಿ. ಎ.ಆರ್. ಮತ್ತು ಟೌನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಪರಿಶೀಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆವಿ ಅಶೋಕ್, ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಖಾದರ್, ನಗರ ಡಿವೈಎಸ್ಪಿ ಚಂದ್ರಶೇಖರ್, ಐ ಜಿ ಪಿ ಜೊತೆಯಲ್ಲಿದ್ದು ಅಗತ್ಯ ಮಾಹಿತಿ ನೀಡಿದರು.