ಪತ್ರಿಕಾ ಸಂಪಾದಕ ಪಿ.ಎನ್. ಮಂಜುನಾಥ ಗೌಡರಿಗೆ ಪೊಲೀಸ್ ನೋಟಿಸ್ : ಸಂಪಾದಕರ ಸಂಘ ಖಂಡನೆ

ತುಮಕೂರು: ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ‘ತುಮಕೂರು ಸ್ಕ್ವೇರ್’ ಎಂದು ಹೆಸರು ಬದಲಾಯಿಸುವ ಜಿಲ್ಲಾಡಳಿತದ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳಿದ್ದ ತುಮಕೂರು ಮಿತ್ರ ದಿನಪತ್ರಿಕೆಯ ಸಂಪಾದಕ ಹಾಗೂ TM First News ಡಿಜಿಟಲ್ ಮಾಧ್ಯಮದ ಮುಖ್ಯಸ್ಥ ಪಿ.ಎನ್. ಮಂಜುನಾಥ ಗೌಡರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿರುವುದನ್ನು ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ತುಮಕೂರು ಜಿಲ್ಲಾ ಘಟಕ

ಖಂಡಿಸಿದೆ.

ಮಂಜುನಾಥ ಗೌಡ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕರಾಗಿದ್ದು, ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಜನಾಭಿಪ್ರಾಯ ಕೇಳಿದ್ದಕ್ಕೆ ನೋಟಿಸ್ ಏಕೆ?

ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯ ಕುರಿತು ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತದ ನಿರ್ಧಾರ ಸರಿಯೇ ಅಥವಾ ತಪ್ಪೇ ಎಂಬುದನ್ನು ತಿಳಿಯಲು ಮಂಜುನಾಥ ಗೌಡರು ತಮ್ಮ ಡಿಜಿಟಲ್ ಮಾಧ್ಯಮದ ಮೂಲಕ ಜನಾಭಿಪ್ರಾಯ ಸಂಗ್ರಹಿಸಲು ಪೋಸ್ಟ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ತುಮಕೂರು ನಗರದ ಹೊಸ ಬಡಾವಣೆ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಚೇತನ್ ಅವರು ದೂರವಾಣಿ ಮೂಲಕ ಸಂಪರ್ಕಿಸಿ, ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ನೋಟಿಸ್ ನೀಡಬೇಕಿದೆ ಎಂದು ತಿಳಿಸಿ, ಬಳಿಕ ಪೊಲೀಸ್ ಸಿಬ್ಬಂದಿ ಮೂಲಕ ನೋಟಿಸ್ ತಲುಪಿಸಿದ್ದಾರೆ ಎನ್ನಲಾಗಿದೆ.

ಆದರೆ, ಸಾರ್ವಜನಿಕ ವಿಷಯವೊಂದರ ಕುರಿತು ಜನರ ಅಭಿಪ್ರಾಯ ಕೇಳಿರುವುದರಲ್ಲಿ ಯಾವ ತಪ್ಪು ನಡೆದಿದೆ? ನೋಟಿಸ್ ನೀಡಲು ನಿರ್ದಿಷ್ಟವಾಗಿ ಯಾವ ಕಾರಣವಿದೆ? ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಸಂಪಾದಕರ ಸಂಘ ಒತ್ತಾಯಿಸಿದೆ.
ಪತ್ರಕರ್ತರು ಸುದ್ದಿ ಮಾಡಲು ಅನುಮತಿ ಪಡೆಯಬೇಕೇ?

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸಾರ್ವಜನಿಕ ಸಮಸ್ಯೆಗಳು, ಆಡಳಿತಾತ್ಮಕ ನಿರ್ಧಾರಗಳು ಹಾಗೂ ಜನರ ಅಭಿಪ್ರಾಯಗಳಿಗೆ ವೇದಿಕೆ ಕಲ್ಪಿಸುವುದು ಅವರ ವೃತ್ತಿಯ ಭಾಗವಾಗಿದೆ. ಸಾರ್ವಜನಿಕ ಮಹತ್ವದ ವಿಷಯದ ಬಗ್ಗೆ ಜನಾಭಿಪ್ರಾಯ ಕೇಳುವುದೇ ತಪ್ಪಾದರೆ, ಪತ್ರಕರ್ತರು ಸುದ್ದಿ ಪ್ರಕಟಿಸುವ ಮುನ್ನ ರಾಜಕಾರಣಿಗಳು ಅಥವಾ ಅಧಿಕಾರಿಗಳ ಅನುಮತಿ ಪಡೆಯಬೇಕೇ? ಎಂದು ಸಂಘ ಪ್ರಶ್ನಿಸಿದೆ.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪ್ರತಿಯೊಂದು ಅಭಿಪ್ರಾಯ ಅಥವಾ ಪೋಸ್ಟ್ ಅನ್ನು ಅಪರಾಧದ ದೃಷ್ಟಿಯಿಂದ ನೋಡುವುದು ಸರಿಯಲ್ಲ. ನೋಟಿಸ್ ನೀಡಿರುವುದಕ್ಕೆ ಕಾನೂನುಬದ್ಧ ಆಧಾರವೇನು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಸಂಘ ಆಗ್ರಹಿಸಿದೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ:

ಪತ್ರಕರ್ತರು ಮತ್ತು ಸಂಪಾದಕರನ್ನು ಅನಗತ್ಯವಾಗಿ ನೋಟಿಸ್‌ಗಳ ಮೂಲಕ ಒತ್ತಡಕ್ಕೆ ಒಳಪಡಿಸುವ ಅಥವಾ ಬೆದರಿಸುವ ಪ್ರಯತ್ನಗಳು ನಡೆದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ದುರುದ್ದೇಶವಿದೆಯೇ ಎಂಬ ಅನುಮಾನಗಳಿಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು. ಕಾನೂನುಬದ್ಧ ವಿಚಾರಣೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಕ್ರಮಗಳ ನಡುವಿನ ವ್ಯತ್ಯಾಸವನ್ನು ಅಧಿಕಾರಿಗಳು ಅರಿತುಕೊಳ್ಳಬೇಕು ಎಂದು ಸಂಘ ತಿಳಿಸಿದೆ.