ಗ್ರಾ.ಪಂ. ಮಾಜಿ ಅಧ್ಯಕ್ಷರ ಮನೆ, ತಾ.ಪಂ. ಕಚೇರಿ ಮೇಲೆ ಲೋಕಾ ದಾಳಿ
ತುಮಕೂರು- ನರೇಗಾ ಕಾಮಗಾರಿ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ರಮೇಶ್ ಮನೆ, ಗ್ರಾ.ಪಂ. ಕಚೇರಿ, ಗುಬ್ಬಿ ತಾ.ಪಂ ಕಚೇರಿ ಸೇರಿದಂತೆ 6 ಕಡೆ ತುಮಕೂರು ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ಮಾಡಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಹಾಗಲವಾಡಿ ಗ್ರಾ.ಪಂ. ಕಚೇರಿ, ಗುಬ್ಬಿ ತಾಲ್ಲೂಕು ಪಂಚಾಯ್ತಿ ಕಚೇರಿ, ಹಾಗಲವಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಮೇಶ್ ಮನೆ, ಪಿಡಿಓ ಶಿವಕುಮಾರ್ ಗುಬ್ಬಿ ಮನೆ, ಮಾಜಿ ಟೆಕ್ನಿಕಲ್ ಅಸಿಸ್ಟೆಂಟ್ ಮಧುಗಿರಿ ಗೋವಿಂದರಾಜು ಎಂಬುವರ ಮನೆ ಹಾಗೂ ಗುಬ್ಬಿಯ ಗುರು ಎಂಟರ್ ಪ್ರೈಸಸ್ ಎಂಬ ಅಂಗಡಿ ಮಾಲೀಕರ ಮನೆ ಮೇಲೂ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ದಾಖಲಾತಿಗಳ ತಪಾಸಣೆ ನಡೆಸಿದ್ದಾರೆ.

ಈ 6 ಕಡೆಗಳಲ್ಲಿ ನಿನ್ನೆ ಮಧ್ಯಾಹ್ನ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಗುಬ್ಬಿ ತಾಲ್ಲೂಕು ಪಂಚಾಯ್ತಿ ಕಚೇರಿ ಸೇರಿದಂತೆ ಮೂರ್ನಾಲ್ಕು ಕಡೆಗಳಲ್ಲಿ ಇಂದು ಸಹ ತನಿಖಾ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದ್ದ ರಸ್ತೆ, ಚರಂಡಿ, ಇನ್ನಿತರೆ ಕಾಮಗಾರಿಗಳಲ್ಲಿ ಸುಮಾರು ಒಂಜೂವರೆಯಿಂದ 2 ಕೋಟಿಗೂ ಅಧಿಕ ಅವ್ಯವಹಾರ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಾಗಲವಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಮನೆಯನ್ನೆಲ್ಲಾ ಶೋಧಿಸಿ ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳ ಹುಡುಕಾಟ ನಡೆಸಿದ್ದು, ಹಲವು ದಾಖಲೆಗಳು ದೊರೆತಿವೆ ಎನ್ನಲಾಗಿದೆ.
ಈ ಹಿಂದೆ ನರೇಗಾ ಯೋಜನೆಯಡಿಯಲ್ಲಿ 2 ಕೋಟಿ ರೂ. ಹಣ ದುರುಪಯೋಗ ಮಾಡಲಾಗಿದೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
2017ರಲ್ಲಿ 15ಕ್ಕೂ ಹೆಚ್ಚು ಜನರ ಖಾತೆಗೆ ನೇರವಾಗಿ ಹಣ ವರ್ಗಾಯಿಸಿರುವ ಪ್ರಕರಣದಲ್ಲೂ ಸಿಕ್ಕಿಬಿದ್ದಿದ್ದರಿಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಮಗಾರಿಗಳ ದುರಸ್ಥಿ ನಿರ್ವಹಣೆ, ಚರಂಡಿ ದುರಸ್ಥಿ ಮತ್ತು ನೈಮರ್ಲ್ಯ ಕಾಮಗಾರಿಗಳ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದರೆನ್ನಲಾಗಿದೆ. ಈ ವಿಚಾರವಾಗಿ ಪಿಡಿಓ ಶಿವಕುಮಾರ್ ಅವರನ್ನು ಸೇವೆಯಿಂದ ಕೆಲ ದಿನಗಳ ಹಿಂದೆ ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಓ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈ ಅವ್ಯವಹಾರ ನಡೆದ ಒಂದು ವರ್ಷದ ಬಳಿಕ ಹಾಗಲವಾಡಿ ಗ್ರಾಮಕ್ಕೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಮನೆ ಸೇರಿದಂತೆ 6 ಕಡೆಗಳಲ್ಲಿ ಮೇಲೆ ದಾಳಿ ಮಾಡಿ ಅಗತ್ಯ ದಾಖಲೆಗಳ ಜತೆಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಹಾಗಲವಾಡಿ ಗ್ರಾಮ ಪಂಚಾಯಿತಿಯಲ್ಲೂ ಕೂಡ ಲೋಕಾಯುಕ್ತರ ತಂಡ ಭೇಟಿ ನೀಡಿ ವಿವಿಧ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಪಿಡಿಓ ಶಿವಕುಮಾರ್ ನರೇಗಾ ಯೋಜನೆಯಲ್ಲಿ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿಗಳಾದ ಸಂತೋಷ್ಕುಮಾರ್, ಮಂಜುನಾಥಗೌಡ ನೇತೃತ್ವದಲ್ಲಿ ಇಂದು ಸಹ ದಾಳಿ ಮುಂದುವರೆಸಿರುವ ಇನ್ಸ್ಪೆಕ್ಟರ್ಗಳಾದ ರಾಘವೇಂದ್ರ, ಎನ್. ನಿರ್ಮಲ, ರಾಜು, ಶಾಂತಿನಾಥ್, ರಾಮನಗರ ಇನ್ಸ್ಪೆಕ್ಟರ್ ಬಿ. ವಿಜಯಕುಮಾರ್ ಮತ್ತು ಸಿಬ್ಬಂದಿ ಗುಬ್ಬಿ ತಾ.ಪಂ. ಕಚೇರಿಯಲ್ಲಿ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
