ತುಮಕೂರು- ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವರಿಂದ ನೋಟಿಸ್ ಜಾರಿಯಾಗಿದೆ ಎಂಬ ಸುದ್ದಿ ತಿಳಿದು ಬಂದಿದೆ.
ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸಂಬಂಧಿಸಿದ ಮಾಹಿತಿಯೊಂದನ್ನು ಕೇಳಿದ್ದು, ಆ ಮಾಹಿತಿಯನ್ನು ಜಿಲ್ಲಾಧಿಕಾರಿ ಅವರು ನೀಡಿಲ್ಲವೆಂದು ರಮೇಶ್ ಬಾಬು ಅವರು ಅರ್ಜಿ ಸಮಿತಿಗೆ ದೂರು ನೀಡಿದ್ದಾರೆ. ಅದರ ಅನ್ವಯ ಅರ್ಜಿ ಸಮಿತಿ ಮುಂದೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಿಗದಿತ ದಿನಾಂಕದಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.

ಅಂದು ಜಿಲ್ಲಾಧಿಕಾರಿ ಅರ್ಜಿ ಸಮಿತಿ ಮುಂದೆ ಹಾಜರಾಗದ ಕಾರಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಖಾಂತರ ಅರ್ಜಿ ಸಮಿತಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ನಿಗದಿತ ದಿನಾಂಕದಂದು ಹಾಜರಾಗುವಂತೆ ಮತ್ತೆ ನೋಟಿಸ್ ಜಾರಿ ಮಾಡಿಸಿದೆ.
ಈ ಹಿಂದೆಯೂ ಸಹ ರಮೇಶ್ ಬಾಬು ಅವರು ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲವೆಂದು ತುಮಕೂರು ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿದ್ದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರು ಸೌಮ್ಯ ಸ್ವಭಾವ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಅಧಿಕಾರಿಯಾಗಿದ್ದರೂ ಸಹ ಅದೇಕೋ, ಏನೋ ಇವರ ವಿರುದ್ಧ ಒಂದಿಲ್ಲೊಂದು ಆರೋಪಗಳು ಕೇಳಿ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ತುಮಕೂರು ಲೋಕಾಯುಕ್ತ ನ್ಯಾಯಾಲಯದಲ್ಲಿಯೂ ಸಹ ಇವರ ವಿರುದ್ಧ ಖಾಸಗಿ ದೂರು ದಾಖಲಾಗಿದೆ.
