ತುಮಕೂರು- ನರೇಗಾ ಕಾಮಗಾರಿ ಅವ್ಯಹಾರ ಆರೋಪದ ಹಿನ್ನೆಲೆಯಲ್ಲಿ ಗುಬ್ಬಿ ತಾಲ್ಲೂಕು ಪಂಚಾಯ್ತಿ ಸೇರಿದಂತೆ 6 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದ ತುಮಕೂರು ಲೋಕಾಯುಕ್ತ ಪೊಲೀಸರು ಇಂದು ಸಹ ಹಾಗಲವಾಡಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆ ಹಾಗೂ ತನಿಖಾ ಕಾರ್ಯವನ್ನು ಮುಂದುವರೆಸಿದ್ದಾರೆ.
ಕಳೆದ 2 ದಿನಗಳಿಂದ ಹಾಗಲವಾಡಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರಮೇಶ್, ಪಿಡಿಓ ಶಿವಕುಮಾರ್, ಟೆಕ್ನಿಕಲ್ ಅಸಿಸ್ಟೆಂಟ್ ಗೋವಿಂದರಾಜು ಹಾಗೂ ಗುರು ಎಂಟರ್ ಪ್ರೈಸಸ್ ಅಂಗಡಿ ಮತ್ತು ಮಾಲೀಕರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿ ಹಲವು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಂದು ಸಹ ಹಾಗಲವಾಡಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ತನಿಖಾ ಕಾರ್ಯ ನಡೆಸುತ್ತಿದ್ದಾರೆ.

2023-24ನೇ ಸಾಲಿನಲ್ಲಿ ಜಿಲ್ಲಾ ಪಂಚಾಯ್ತಿಯಿಂದ ಕ್ರಿಯಾ ಯೋಜನೆಯಲ್ಲಿ 8 ಕಾಮಗಾರಿ ರದ್ದು ಮಾಡಲಾಗಿತ್ತು. ಆದರೂ ಸಹ ರದ್ದು ಮಾಡಿರುವ ಕಾಮಗಾರಿಯನ್ನೆ ಮಾಡಿರುವುದಾಗಿ 2 ಕೋಟಿಗೂ ಹೆಚ್ಚು ಹಣವನ್ನು ಅವರಿವರ ಖಾತೆಗೆ ವರ್ಗಾವಣೆ ಮಾಡಿ ದುರುಪಯೋಗ ಪಡಿಸಿಕೊಂಡಿರುವುದು ಇದೀಗ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬೆಳಕಿಗೆ ಬರುತ್ತಿದೆ.
ಕಳೆದ 2 ದಿನಗಳಿಂದ ಲೋಕಾಯುಕ್ತ ಪೊಲೀಸರು ತನಿಖಾ ಕಾರ್ಯ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಾಗಲವಾಡಿ ಗ್ರಾಮ ಪಂಚಾಯ್ತಿಯಲ್ಲಿ ಅಗೆದು-ಬಗೆದಷ್ಟೂ ಅವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ ಎನ್ನಲಾಗಿದೆ.
ಹಾಗಲವಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್, ಪಿಡಿಓ ಶಿವಕುಮಾರ್, ಟೆಕ್ನಿಕಲ್ ಅಸಿಸ್ಟೆಂಟ್ ಗೋವಿಂದರಾಜು ಹಾಗೂ ಸಂಬಂಧಿಸಿದ ಇಂಜಿನಿಯರ್ ಸೇರಿಕೊಂಡು ಜಿಲ್ಲಾ ಪಂಚಾಯ್ತಿಯಿಂದ ರದ್ದಾಗಿರುವ 8 ಕಾಮಗಾರಿಯನ್ನು ಮಾಡಿರುವುದಾಗಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಮೃತಪಟ್ಟವರ ಹೆಸರಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಠಿ ಮಾಡಿ ಹಣ ಲಪಟಾಯಿಸಿದ್ದಾರೆ ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಯಲಾಗುತ್ತಿದೆ.
ಗುಬ್ಪಿ ತಾಲ್ಲೂಕು ಪಂಚಾಯ್ತಿ ಕಚೇರಿ ಸೇರಿದಂತೆ 6 ಕಡೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಈಗಾಗಲೇ 5 ಕಡೆ ತನಿಖೆ ಪೂರ್ಣಗೊಳಿಸಿದ್ದು, ಹಾಗಲವಾಡಿ ಗ್ರಾಮ ಪಂಚಾಯ್ತಿ ಹಾಗೂ ಗುರು ಎಂಟರ್ ಪ್ರೈಸಸ್ ಅಂಗಡಿ ಮತ್ತು ಮಾಲೀಕನ ಮನೆಯಲ್ಲಿ ರಾತ್ರಿ 9 ಗಂಟೆವರೆಗೂ ಹಲವು ದಾಖಲಾತಿಗಳ ಪರಿಶೀಲನೆ ನಡೆಸಿದ್ದರು. ಮತ್ತೆ ಇಂದು ಬೆಳಿಗ್ಗೆಯಿಂದಲೂ ಸಹ ತನಿಖಾ ಕಾರ್ಯವನ್ನು ಹಾಗಲವಾಡಿ ಗ್ರಾ.ಪಂ. ಕಚೇರಿಯಲ್ಲಿ ಮುಂದುವರೆಸಿದ್ದು, ಹಲವು ಮಹತ್ವದ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಡಿವೈಎಸ್ಪಿಗಳಾದ ಸಂತೋಷ್ಕುಮಾರ್, ಮಂಜುನಾಥಗೌಡ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ರಾಘವೇಂದ್ರ, ಎನ್. ನಿರ್ಮಲ, ರಾಜು, ಶಾಂತಿನಾಥ್ ಮತ್ತು ಸಿಬ್ಬಂದಿ ಹಾಗಲವಾಡಿ ಗ್ರಾ.ಪಂ. ಕಚೇರಿಯಲ್ಲಿ ತನಿಖಾ ಕಾರ್ಯವನ್ನು ಮುಂದುವರೆಸಿದ್ದಾರೆ.
