ತುಮಕೂರು: ಜಿಲ್ಲೆ ಮೂರು ಲೋಕಸಭಾ ಕ್ಷೇತ್ರ, 11 ವಿಧಾನಸಭಾ ಕ್ಷೇತ್ರ, 10 ತಾಲ್ಲೂಕು ಹೊಂದಿದ್ದರು ಸಹ ಜಿಲ್ಲೆಗೆ ಇಬ್ಬರು ಜಿಲ್ಲಾ ಮಟ್ಟದ ಕಾರ್ಮಿಕ ಅಧಿಕಾರಿಗಳು ಇದ್ದಾರೆ.
ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗಾಗಿ ಬಹಳಷ್ಟು ಯೋಜನೆಗಳು ಇದ್ದು ಅವುಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ನೀಡುವ ಕಾರ್ಯ ಪ್ರಾಮಾಣಿಕತೆಯಿಂದ ನಡೆಯಬೇಕಿದೆ.
ದಳ್ಳಾಳಿಗಳ ಕೇಂದ್ರವಾಗಿದ್ದ ತುಮಕೂರು ವಿಭಾಗದ ಕಾರ್ಮಿಕ ಇಲಾಖೆ ಇನ್ನು ಮುಂದಾದರು ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದೇ ನೋಡೋಣ ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಸಂಘಟನೆಯ ಮುಖಂಡರುಗಳು, ತುಮಕೂರು ವಿಭಾಗ ಕಚೇರಿಯ ವ್ಯಾಪ್ತಿಗೆ ಆರು ತಾಲೂಕುಗಳು ಸೇರಿದ್ದು ಎಲ್ಲ ತಾಲೂಕುಗಳಲ್ಲಿ ಬಾಲ ಕಾರ್ಮಿಕರನ್ನು ಉಪಯೋಗಿಸಿಕೊಂಡು ಕೆಲಸ ಮಾಡಿಸುವ ಉದ್ಯಮಗಳು ಬೆಳೆದು ನಿಂತಿವೆ, ಇದಕ್ಕೆ ಕಡಿವಾಣ ಹಾಕಲು ಈ ಹಿಂದೆಯೂ ಅಧಿಕಾರಿಗಳು ಪ್ರಯತ್ನಪಟ್ಟಿದ್ದಾರೆ, ಪ್ರಸ್ತುತ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್ ಕೆಲ ನ್ಯೂನತೆಗಳಿಗಾದರೂ ಕಡಿವಾಣ ಹಾಕುವರೆ? ಇದಕ್ಕೆ ಸಂಘಟನೆಗಳ ಮತ್ತು ಸಾರ್ವಜನಿಕರ ಹಾಗೂ ಇಲಾಖೆ ಮೇಲಾಧಿಕಾರಿಗಳ ಸಹಕಾರವು ಸಿಗುತ್ತದೆ.
“ನಮ್ಮ ಪ್ರತಿನಿಧಿ”ಯೊಂದಿಗೆ ಮಾತನಾಡಿದ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್ ಜಿಲ್ಲಾ ಕೇಂದ್ರಕ್ಕೆ ಇತ್ತೀಚೆಗಷ್ಟೇ ಬಂದಿದ್ದೇನೆ, ಹಲವು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ, ಒಂದೇ ಬಾರಿ ಎಲ್ಲವನ್ನೂ ಮಾಡುತ್ತೇನೆ ಎಂದು ಹೇಳುವುದಿಲ್ಲ, ಜಿಲ್ಲೆಯ ಕಾರ್ಮಿಕರ ಪರವಾಗಿ ಶಕ್ತಿ ಮೀರಿ ಇಲಾಖೆ ಮೇಲಾಧಿಕಾರಿಗಳ ಸಹಕಾರ ಪಡೆದು ಸರ್ಕಾರದ ಮಾರ್ಗಸೂಚಿಯಂತೆ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಒದಗಿಸಲು ಹಿಂದೆ- ಮುಂದೆ ನೋಡುವುದಿಲ್ಲ. ಆರು ತಾಲೂಕುಗಳ ಇನ್ಸ್ಪೆಕ್ಟರ್ಗಳು ಮತ್ತು ಕಚೇರಿ ಸಿಬ್ಬಂದಿ, ಸಾರ್ವಜನಿಕರು, ಸಂಘಟನೆಗಳ ಸಹಕಾರ ಪಡೆದು ತುಮಕೂರಿನಲ್ಲಿ ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಬೇಕೆಂಬುದೇ ನಮ್ಮ ಮಹದಾಸೆ.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಮತ್ತು ಕ್ಷೇತ್ರದ ಶಾಸಕರು, ಸಂಸದರ ಸಲಹೆ ಮಾರ್ಗದರ್ಶನ ಪಡೆದು ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸಲು ಬದ್ಧ, ಆಯ ಕ್ಷೇತ್ರಗಳಲ್ಲಿ ಆಯ ಜನಪ್ರತಿನಿಧಿಗಳ ಮೂಲಕವೇ ಸೌಲಭ್ಯಗಳನ್ನು ವಿತರಿಸಲಾಗುವುದು. ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸೌಲಭ್ಯ ಪಡೆಯಲು ಮುಂದಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ತಾವು ಹಿಂದೆ ಬೀಳುವುದಿಲ್ಲ ಎಂದು ಪುನರುಚ್ಚರಿಸಿದರು.
ತುಮಕೂರು, ತಿಪಟೂರು ತಾಲೂಕುಗಳಲ್ಲಿ ಬಾಲ ಕಾರ್ಮಿಕರ ಬಳಕೆ ಕೆಲಸದಲ್ಲಿ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ, ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಲಾಖೆಯಿಂದ ಆರು ತಾಲೂಕುಗಳಲ್ಲೂ ಸದ್ಯದಲ್ಲೇ ಹಮ್ಮಿಕೊಳ್ಳಲಾಗುವುದು. ಉದ್ಯಮಗಳ ಮಾಲೀಕರಿಗೂ ತಿಳುವಳಿಕೆ ನೀಡಿ ನಂತರ ಅದೇ ಪರಿಸ್ಥಿತಿ ಮುಂದುವರಿದರೆ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ತುಮಕೂರು ಕಚೇರಿಯಲ್ಲಿ ಎಷ್ಟೇ ದಿನ ಇರಲಿ ಉತ್ತಮ ಕೆಲಸ ಮಾಡಿ ಹೆಜ್ಜೆ ಗುರುತು ಬಿಟ್ಟು ಹೋಗುವುದು ಖಚಿತ, ಇದಕ್ಕೆ ಕಾರ್ಮಿಕ ಸಂಘಟನೆಗಳು ಸೇರಿದಂತೆ ಎಲ್ಲರ ಸಹಕಾರ ತುಂಬಾ ಅತ್ಯಗತ್ಯ. ಕಾರ್ಮಿಕರು ಸಹ ಏನೇ ಸಮಸ್ಯೆ ಇದ್ದರೂ ನೇರವಾಗಿ ನಮ್ಮನ್ನು ಭೇಟಿ ಮಾಡಿ ಹೇಳಬಹುದು, ಸೂಕ್ತ ದಾಖಲೆಗಳೊಂದಿಗೆ ಕಚೇರಿ ವೇಳೆಯಲ್ಲಿ ಲಿಖಿತ ದೂರು ನೀಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.