ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ನಕ್ಸಲ್ ಆತಂಕವು ಸಾರ್ವಜನಿಕರನ್ನು ಹಾಗೂ ಪೊಲೀಸ್ ಇಲಾಖೆಯನ್ನು ನಿದ್ದೆಗೆಡಿಸಿದೆ.
ತಾಲ್ಲೂಕಿನ ಕನಕಲಬೆಂಡೆಯಲ್ಲಿ ನಕ್ಸಲ್ ಶಂಕಿತ ‘ಕನಕಲಬೆಂಡೆಯ ಉಪ್ಪಾರ್ ವೆಂಕಟೇಶ್’ಗಾಗಿ ಪೊಲೀಸರು ತೀವ್ರ ಶೋಧನಾ ಕಾರ್ಯವನ್ನು ಮುಂದುವರಿಸಿದ್ದಾರೆ.

ಆರೋಪಿ ವೆಂಕಟೇಶ್ ಆಗಾಗ್ಗೆ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದು, ಆತಯನನ್ನು ಸೆರೆಹಿಡಿಯಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ನೇತೃತ್ವದಲ್ಲಿ ಬಿರುಸಿನ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಈ ಕಾರ್ಯಾಚರಣೆಗಾಗಿ ಒಟ್ಟು ಐದು ವಿಶೇಷ ಇನ್ಸ್ಪೆಕ್ಟರ್ ತಂಡಗಳನ್ನು ರಚಿಸಲಾಗಿದ್ದು, 1 ಡಿವೈಎಸ್ಪಿ, 5 ಜನ ಇನ್ಸ್ಪೆಕ್ಟರ್ಗಳು ಹಾಗೂ 10 ಜನ ಸಬ್ಇನ್ಸ್ಪೆಕ್ಟರ್ಗಳು ಇದರ ನೇತೃತ್ವ ವಹಿಸಿದ್ದಾರೆ.
ಇಂದು ಬೆಳಿಗ್ಗೆ 6:00 ಗಂಟೆಯಿಂದ 10:00 ಗಂಟೆಯವರೆಗೆ ಕನಕಲಬೆಂಡೆ ಸುತ್ತಮುತ್ತಲಿನ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೃಹತ್ ಶೋಧ ಕಾರ್ಯ ನಡೆಸಲಾಗಿದೆ. ನಕ್ಸಲ್ ಶಂಕಿತ ವೆಂಕಟೇಶ್ನ ಜಾಡುಹಿಡಿಯಲು ಪೊಲೀಸರು ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳ ಸಹಾಯವನ್ನೂ ಪಡೆದುಕೊಂಡಿದ್ದು, ತೀವ್ರ ಹುಡುಕಾಟ ಮುಂದುವರಿದಿದೆ.
