ತುಮಕೂರು – ಮನೆಯೊಂದರ ಕಾಂಪೌಂಡ್ ಮೇಲಿನ ಗ್ರಿಲ್‌ನ ಕತ್ತರಿಸಿ ಮುಂಭಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಒಳನುಗ್ಗಿರುವ ಕಳ್ಳರು ಮನೆಯೊಳಗೆ ಮಂಚದ ಬಾಕ್ಸ್‌ನಲ್ಲಿದ್ದ ಸುಮಾರು 2.25 ಕೋಟಿ ರೂ. ಬೆಲೆಯ ಚಿನ್ನ-ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ನಗರದ ಚಿಕ್ಕಪೇಟೆಯಲ್ಲಿ ನಡೆದಿದೆ.
ನಗರದ ಚಿಕ್ಕಪೇಟೆಯಲ್ಲಿ ವಾಸವಾಗಿರುವ ಹಾಗೂ ಅರಳೇಪೇಟೆಯಲ್ಲಿ ಚಿನ್ನ-ಬೆಳ್ಳಿ ಕರಗಿಸುವ ಅಂಗಡಿ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಲಕ್ಷ್ಮಣ್ ಗಣಪತ್ ಪವಾರ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಲಕ್ಷ್ಮಣ್ ಗಣಪತ್ ಪವಾರ್ ಅವರು ಕುಟುಂಬ ಸಮೇತ ಹಾಗೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸಹಿತವಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಖಾನಾಪುರ ತಾಲ್ಲೂಕು ನಾಗನಾತ್ ನಗರದ ಶ್ರೀನಾಥ್ ಬಾಕ್ವೆಂಟ್ ಹಾಲ್‌ನಲ್ಲಿ ಆ. 29 ಮತ್ತು 30 ರಂದು ನಿಗದಿಯಾಗಿದ್ದ ಸಂಬಂಧಿಕರ ಮದುವೆಗೆ 15 ದಿನಗಳ ಮುಂಚಿತವಾಗಿಯೇ ತೆರಳಿದ್ದರು. ಮದುವೆ ಮುಗಿಸಿಕೊಂಡು ಅಂಗಡಿಯ ಕಾರ್ಮಿಕರು ಆ. 30 ರಂದು ರಾತ್ರಿ ತುಮಕೂರಿಗೆ ವಾಪಸ್ಸಾಗಿದ್ದರು.
ಆ. 31 ರಂದು ಬೆಳಿಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಮಹಂತೇಶ್ ಎಂಬಾತ ಮನೆ ಬಳಿ ನೋಡಿದಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ. ತಕ್ಷಣ ಈತ ಮಾಲೀಕ ಲಕ್ಷ್ಮಣ್ ಗಣಪತ್ ಪವಾರ್‌ರವರಿಗೆ ದೂರವಾಣಿ ಕರೆ ಮಾಡಿ ಮನೆಯ ಕಾಂಪೌಂಡ್ ಮೇಲಿನ ಗ್ರಿಲ್‌ನ್ನು ಯಾರೋ ಕಳ್ಳರು ಕಟ್ ಮಾಡಿ ಕಳ್ಳತನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ತಿಳಿದ ಕೂಡಲೇ ಗಾಬರಿಯಿಂದ ತುಮಕೂರಿಗೆ ವಾಪಸ್ಸಾದ ಲಕ್ಷ್ಮಣ್ ಗಣಪತ್ ಪವಾರ್ ಅವರು ಮನೆ ಬಳಿ ಹೋಗಿ ನೋಡಿದಾಗ ಕಳ್ಳರು ಕಾಂಪೌಂಡ್ ಮೇಲಿನ ಗ್ರಿಲ್ ಕತ್ತರಿಸಿ ಕಬ್ಬಿಣದ ಸರಳುಗಳನ್ನು ಪ್ಯಾಸೇಜ್‌ನಲ್ಲೇ ಎಸೆದು ಮುಂಭಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಒಳನುಗ್ಗಿ ರೂಂನಲ್ಲಿದ್ದ ಮಂಚದ ಬಾಕ್ಸ್‌ನಲ್ಲಿ ಇಡಲಾಗಿದ್ದ ಸುಮಾರು 2.25 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಸುಮಾರು 85 ಲಕ್ಷ ಬೆಲೆಯ 798 ಗ್ರಾಂ ಚಿನ್ನ ಮತ್ತು 1.40 ಕೋಟಿ ಬೆಲೆಯ 600.028 ಗ್ರಾಂ ಬೆಳ್ಳಿ ವಸ್ತುಗಳನ್ನು ಕಳ್ಳರು ದೋಚಿದ್ದಾರೆ ಎಂದು ಮನೆ ಮಾಲೀಕ ಲಕ್ಷ್ಮಣ್ ಗಣಪತ್ ಪವಾರ್ ಅವರು ತುಮಕೂರು ನಗರಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಮನೆಯಲ್ಲಿದ್ದ ಚಿನ್ನ-ಬೆಳ್ಳಿ ವಸ್ತುಗಳನ್ನು ಹಲವು ದಿನಾಂಕಗಳಲ್ಲಿ ಖರೀದಿಸಿದ್ದು, ಇದಕ್ಕೆ ಸಂಬಂಧಿಸಿದ ಬಿಲ್‌ಗಳನ್ನು ಕೊಡುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ತುಮಕೂರು ನಗರಠಾಣೆ ಇನ್ಸ್‌ಪೆಕ್ಟರ್ ಅವಿನಾಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಡಿಷನಲ್ ಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳ್ಳತನವಾಗಿರುವ ಚಿಕ್ಕಪೇಟೆಯ ಮನೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಈ ಕಳ್ಳತನ ಆ. 28 ರಿಂದ 31 ರೊಳಗೆ ನಡೆದಿರಬಹುದು ಎಂದು ಶಂಕಿಸಿರುವ ಪೊಲೀಸ್ ಅಧಿಕಾರಿಗಳು ಕಳ್ಳರ ಪತ್ತೆಗಾಗಿ ವಿಶೇಷ ತಂಡ ರಚಿಸಿರುವುದಾಗಿ ತಿಳಿಸಿದ್ದಾರೆ.
