ತುಮಕೂರು- ತುಮಕೂರು ಪಾಲಿಕೆ ಆಯುಕ್ತೆ ಶುಭ ಅವರ ವಿರುದ್ಧ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಿಡಿಕಾರಿರುವ ಪ್ರಸಂಗ ಜರುಗಿದೆ.
ಇತ್ತೀಚೆಗಷ್ಟೇ ವರ್ಗಾವಣೆಯಾಗಿ ತುಮಕೂರು ಪಾಲಿಕೆ ಆಯುಕ್ತರಾಗಿ ಬಂದಿರುವ ಶುಭ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಹುಡುಕುವ ಕೆಲಸ ಮಾಡುತ್ತಿದ್ದಾರೆ.
ಅದೇ ರೀತಿ ಫುಟ್ಪಾತ್ ವ್ಯಾಪಾರಿಗಳ ತೆರವು ಕಾರ್ಯಕ್ಕೆ ಮುಂದಾದಾಗ ಪರ-ವಿರೋಧದ ಮಾತುಗಳು ಕೇಳಿ ಬಂದು ಸದ್ಯಕ್ಕೆ ಇಂತಿಷ್ಟು ದಿನದಲ್ಲಿ ಪುಟ್ ಪಾತ್ ಒತ್ತುವರಿ ತೆರವುಗೊಳಿಸಬೇಕು ಎಂದು ಗಡುವು ನೀಡಲಾಗಿದೆ.
ಅದೇಕೋ ಏನೋ ಗೊತ್ತಿಲ್ಲ ಪಾಲಿಕೆ ಆಯುಕ್ತೆ ಶುಭ ಅವರ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಿಡಿಕಾರಿದರು ಎಂಬ ವಿಚಾರವನ್ನು ಪಾಲಿಕೆ ಆಯುಕ್ತೆ ಶುಭರವರು ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲವರ ಬಳಿ ಹೇಳುತ್ತಾ ಕಣ್ಣೀರಿಟ್ಟರು ಎಂದು ಹೇಳಲಾಗುತ್ತಿದೆ.
ಪಾಲಿಕೆ ಆಯುಕ್ತೆ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಪ್ರಶಂಸೆಗೆ ಕಾರಣವಾಗಿದೆ. ಅಂತೆಯೇ ಜಿಲ್ಲಾಧಿಕಾರಿಯು ಇತ್ತೀಚಿನ ದಿನಗಳಲ್ಲಿ ಕೆಲ ತಾಲ್ಲೂಕು ಹಾಗೂ ಇಲಾಖೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚಿಸುತ್ತಾ ಬಂದಿದ್ದಾರೆ.
ಈ ಇಬ್ಬರು ಮಹಿಳಾ ಅಧಿಕಾರಿಗಳೇ ಆಗಿರುವುದರಿಂದ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಆದರೆ ಯಾವ ಕಾರಣಕ್ಕೆ ಪಾಲಿಕೆ ಆಯುಕ್ತೆ ಶುಭ ರವರ ವಿರುದ್ಧ ಜಿಲ್ಲಾಧಿಕಾರಿ ಕಿಡಿಕಾರಿದರು ಎಂಬುದನ್ನು ತಿಳಿಯಬೇಕಿದೆ.
ಅಂತೆಯೇ ಶುಭರವರು ವಾಸಕ್ಕೆ ವಸತಿಗೃಹಗಾಗಿ ಕೋರಿಕೆ ಅರ್ಜಿ ಸಲ್ಲಿಸಿದಾಗ ವಾಸಕ್ಕೆ ಯೋಗ್ಯವಲ್ಲದ ವಸತಿಗೃಹ ನೀಡಿರುವುದಾಗಿಯೂ ಶುಭರವರು ತಮ್ಮ ಅಸಮಾಧಾನವನ್ನು ತಮ್ಮ ಆಪ್ತ ವಲಯದಲ್ಲಿ ಹೊರ ಹಾಕಿದ್ದಾರೆ.
ಈ ಬಗ್ಗೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಿ ಇಬ್ಬರೂ ಅಧಿಕಾರಿಗಳಿಗೆ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿ ಮುಂದಿನ ದಿನಗಳಲ್ಲಿ ಇಬ್ಬರು ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಸೂಚಿಸಬೇಕು ಎಂಬುದು ಹಲವರ ಮಾತಾಗಿದೆ.
ಇನ್ನು ಕೆಲವರು ಹೇಳುವ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಪಾಲಿಕೆ ಆಯುಕ್ತೆ ಶುಭ ರವರ ಕಾರ್ಯವೈಖರಿ ವಿರುದ್ಧ ಕಿಡಿಕಾರಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.
