ಹಿಜಾಬ್ ವಿವಾದ: ಶಾಲಾ-ಕಾಲೇಜುಗಳಲ್ಲಿ ಸಂಘರ್ಷ ಬೇಡ
ತುಮಕೂರು - ಇಂದಿನ ಶಾಲಾ, ಕಾಲೇಜುಗಳು ಪ್ರಾಚೀನ ಗುರುಕುಲಗಳಿದ್ದಂತೆ. ಇಂತಹ ಪವಿತ್ರ ಸ್ಥಳದಲ್ಲಿ ವಸ್ತ್ರ ಸಂಹಿತೆ ಹೆಸರಿನಲ್ಲಿ ಸಂಘರ್ಷಕ್ಕೆ ನಾಂದಿ ಹಾಡುವುದು ಬೇಡ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂರಿಗೆ ಮುಜುಗರ ತರುವಂತಹ ಕೆಲಸಗಳು ನಡೆಯುತ್ತಿದ್ದು, ದೇಶ ವಿಭಜನೆ, ಏಕೀಕರಣ ಎರಡನ್ನೂ ನೋಡಿರುವ ನಾವು ಪರಸ್ಪರ ಸೌಹಾರ್ದತೆಯಿಂದ ಕೂಡಿ ಬಾಳಬೇಕಾಗಿದೆ ಎಂದರು.
ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ವಸ್ತ್ರಸಂಹಿತೆ ಸಂಘರ್ಷ ಆರಂಭವಾಗಿದ್ದು, ಸರ್ಕಾರ ಇದನ್ನು ಈ ಮಟ್ಟಕ್ಕೆ ಬೆಳೆಯಲು ಬಿಡದೆ ಮೊಟಕುಗೊಳಿಸಿ ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದರು.
ಕರ್ನಾಟಕ ರಾಜ್ಯ ಆಪ್ಘಾನಿಸ್ತಾನ, ತಾಲಿಬಾನ್ ಅಲ್ಲ. ಇದನ್ನು ಪ್ರಚೋದಿಸಲು ಹೊರಟಿರುವ ರಾಜಕಾರಣಿಗಳಿಗೆ ಜನ ತಕ್ಕಪಾಠ ಕಲಿಸಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಸಂಘರ್ಷದ ವಿರುದ್ಧ ಸರ್ಕಾರ ಗಮನಹರಿಸಿ ಸೂಕ್ತ ಆದೇಶ ಮಾಡಬೇಕು ಎಂದರು.
ಹಿಜಾಬ್ ಧರಿಸುವಂತೆ ಯಾವುದೇ ಧರ್ಮದಲ್ಲಿ ಹೇಳಿಲ್ಲ. ಈ ಹಿಂದೆ ಇಂತಹ ಆಚರಣೆ ಗಳು ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವು ತಿಳಿಗೇಡಿ ಗಳು ಈ ಪದ್ಧತಿ ಆಚರಣೆಗೆ ತಂದಿದ್ದಾರೆ ಎಂದ ಅವರು, ಕೇರಳ ರಾಜ್ಯದ ಉಚ್ಛನ್ಯಾಯಾಲಯ ಇದನ್ನು ನಿಷೇಧಿಸಿದೆ. ವಿಶ್ವದ 15 ರಿಂದ 20 ರಾಷ್ಟ್ರಗಳು ಸಹ ಇಂತಹ ಪದ್ಧತಿಯನ್ನು ನಿಷೇಧ ಮಾಡಿವೆ ಎಂದರು.
ಮುಸುಕು ಹಾಕಿಕೊಂಡು ಅಥವಾ ಬುರ್ಕಾ ಧರಿಸಿಕೊಂಡು ಓಡಾಡುವುದು ಕೆಲವು ಸಮಾಜಘಾತುಕ ಶಕ್ತಿಗಳಿಗೆ ತಲೆಮರೆಸಿಕೊಂಡು ಓಡಾಡಲು ಅವಕಾಶ ನೀಡಿದಂತಾಗುತ್ತದೆ. ಕಿಡಿಗೇಡಿಗಳು, ಟೆರರಿಸ್ಟ್‌ಗಳು ಇದನ್ನು ಬಳಸಿಕೊಂಡು ಸುಲಭವಾಗಿ ಕಾನೂನಿನ ಕೈಗಳಿಂದ ತಪ್ಪಿಸಿಕೊಂಡು ಓಡಾಡಲು ಸಾಧ್ಯವಾಗುತ್ತದೆ. ಆದ ಕಾರಣ ಇಂತಹ ಪದ್ಧತಿ ಅಗತ್ಯವಿಲ್ಲ ಎಂದರು.
ಪ್ರತಿಯೊಬ್ಬರು ಶಾಂತಿ, ಸೌಹಾರ್ದತೆಯಿಂದ ಬಾಳಿ ಸಮಾಜದ ಸ್ವಾಸ್ತ್ಯ ಕಾಪಾಡಬೇಕು. ಒಳ್ಳೆಯ ಚಿಂತನೆಗಳಿಗೆ ಸಹಕಾರ ನೀಡುತ್ತ ಎಲ್ಲರೂ ಕೂಡಿ ಬಾಳುವಂತಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಯಸಿಂಹರಾವ್, ಕೆ.ಪಿ. ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.