Date Time: 28-03-2023 23:47

ದಿನೇ.. ದಿನೇ.. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ : ಗಮನ ಹರಿಸದ ಪೊಲೀಸ್ ಅಧಿಕಾರಿಗಳು

ತುಮಕೂರು : ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಮುಂಭಾಗ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುವಾಗ ವಾಹನ ಸವಾರರು ಬುಧವಾರ ಮಧ್ಯಾಹ್ನ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಾರ್ಯನಿಮಿತ್ತ ಬರುವ ಸಾರ್ವಜನಿಕರು ಕಚೇರಿ ಮುಂಭಾಗ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಿದ್ದರು. ಆ ರಸ್ತೆ ಮುಂದೆ ಸಾಗಿದರೆ ಅಂದಾಜು ೧೦೦ ಮೀಟರ್ ಗೆ ಮುಕ್ತಾಯಗೊಳ್ಳುತ್ತದೆ. ಅಲ್ಲಿ ಯಾವುದೇ ವಾಹನಗಳ ಸಂಚಾರವೂ ಇರುವುದಿಲ್ಲ. ಆದರೂ ಅನಗತ್ಯವಾಗಿ ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು.
ಟ್ರಾಫಿಕ್ ಪೊಲೀಸರು ಹೇಳುವ ಪ್ರಕಾರ ಸಬ್ ರಿಜಿಸ್ಟ್ರಾರ್ ಕಚೇರಿಯ ೫೦ ಮೀಟರ್ ಅಂತರದಲ್ಲಿ  ತುಮಕೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಇರುವುದರಿಂದ ಪೊಲೀಸ್ ಸಿಬ್ಬಂದಿ ಆ ರಸ್ತೆಯಲ್ಲಿ  ಸಂಚರಿಸಲು ತೊಂದರೆಯಾಗುತ್ತದೆ. ಅದಕ್ಕೆ ಟೋಯಿಂಗ್ ಮಾಡುತ್ತೇವೆ ಎಂಬ ನಗೆಪಾಟಲಿನ ಉತ್ತರ ನೀಡಿದ್ದು ಸಾರ್ವಜನಿಕರ ಕೋಪಕ್ಕೆ ಇನ್ನು ಎಡೆಮಾಡಿಕೊಟ್ಟಿತು.
ಆ ವೇಳೆಗೆ ಸಂಬಂಧ ಟ್ರಾಫಿಕ್ ಪಿಎಸ್‌ಐ ನಾಗರಾಜು ಸ್ಥಳಕ್ಕೆ ಬಂದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ ನಂತರ ಸಾರ್ವಜನಿಕರು ಸ್ವಲ್ಪ ಮಟ್ಟಿಗೆ ಸಮಾಧಾನಗೊಂಡರು.
ಇದೇ ರೀತಿ ನಗರದ  ಬಹುತೇಕ ರಸ್ತೆಗಳಲ್ಲಿ ನೋ ಪಾರ್ಕಿಂಗ್ ಫಲಕಗಳನ್ನು ಹಾಕಿ ಅನಗತ್ಯವಾಗಿ ಟೋಯಿಂಗ್ ಮಾಡುತ್ತಾರೆ ಎಂಬ ವ್ಯಾಪಕ ದೂರುಗಳು ಕೇಳಿ ಬಂದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸದೇ ಇರುವುದು ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಹುತೇಕ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಹಾಗೂ ಪೊಲೀಸ್ ಇಲಾಖೆ  ಜತೆಗೂಡಿ ನೋಟಿಫಿಕೇಶನ್ ಆಗದೇ ಇರುವ ಸ್ಥಳಗಳಲ್ಲಿಯೂ ನೋ-ಪಾರ್ಕಿಂಗ್ ಫಲಕಗಳನ್ನು ಹಾಕಿ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುವುದು, ಕಾರುಗಳಿಗೆ ವ್ಹೀಲ್ ಲಾಕ್ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ವಾಹನ ಸವಾರರು ಪೊಲೀಸರನ್ನು ಪ್ರಶ್ನಿಸಿದರೆ ಅವರ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ದರ್ಪ ತೋರುತ್ತಾರೆ ಎಂದು ಜನಸಾಮಾನ್ಯರು ದೂರುತ್ತಿದ್ದಾರೆ.
ಜಿಲ್ಲಾ ಎಸ್ಪಿಯವರೆ ನೋಟಿಫಿಕೇಶನ್ ಬಗ್ಗೆ ಮಾಹಿತಿ ನೀಡಿ : ನಗರದ ಯಾವ ಯಾವ ರಸ್ತೆಗಳಲ್ಲಿ ನೋಪಾರ್ಕಿಂಗ್ ಹಾಗೂ ಆಲ್ಟರ್ನೇಟಿವ್ ಪಾರ್ಕಿಂಗ್‌ಮಾಡಲಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು. ಇಂತಿಷ್ಟು ಜಾಗದಲ್ಲಿ ದ್ವಿಚಕ್ರ ವಾಹನ ಅಂತೆಯೇ ಇತರೆ ಲಘು ವಾಹನಗಳನ್ನು ಇಂತಿಷ್ಟು ಜಾಗದಲ್ಲಿ ನಿಲ್ಲಿಸ ಬೇಕು ಎಂದು ಗೆಜೆಟ್ ನೋಟಿಫಿಕೇಶನ್ ಆಗಿರುವ ಬಗ್ಗೆ ಮಾಹಿತಿ ನೀಡಿದರೆ  ಜನಸಾಮಾನ್ಯರು ಟ್ರಾಫಿಕ್ ನಿಯಮ ಪಾಲಿಸಲು ಅನುಕೂಲ ವಾಗುತ್ತದೆ ಎಂಬುದು ಪ್ರಜ್ಞಾವಂತ ನಾಗರಿಕರ ಅನಿಸಿಕೆಯಾಗಿದೆ. ಪೊಲೀಸ್ ಇಲಾಖೆಯಿಂದ ಇದುವರೆಗೂ ಅಧಿಕೃತ ಗೆಜೆಟ್ ನೋಟಿಫಿಕೇಷನ್ ಆಗಿರುವ ನೋ-ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಎಲ್ಲೂ ಮಾಹಿತಿ ನೀಡಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.
 ನಿಯಮ ಬಾಹಿರವಾಗಿ ಟೋಯಿಂಗ್ ವೆಹಿಕಲ್ :  ಟೋಯಿಂಗ್ ವಾಹನದಲ್ಲಿ ಎಎಸ್‌ಐ ಹಂತದ ಅಧಿಕಾರಿಯೇ ಇರಬೇಕು ಎಂದು ನಿಯಮವಿದ್ದರೂ ಪೊಲೀಸ್ ಕಾನ್ ಸ್ಟೆಬಲ್ ಇಲ್ಲವೇ ಹೆಡ್ ಕಾನ್ ಸ್ಟೆಬಲ್‌ನ್ನು ಟೋಯಿಂಗ್ ವೆಹಿಕಲ್ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಓರ್ವ ಎಎಸ್‌ಐ ಚಿಲುಮೆ ಸಮುದಾಯ ಭವನದ ಆವರಣದಲ್ಲಿ ದಂಡ ವಿಧಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಟೋಯಿಂಗ್ ವೆಹಿಕಲ್ ನಲ್ಲಿ  ನಿಯಮಾನುಸಾರ ಇರಬೇಕಾದ ಎಎಸ್‌ಐ ಇಲ್ಲದಿರುವುದಾದರೂ ಏಕೆ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿ ಬಂದರೂ ಉನ್ನತ ಪೊಲೀಸ್ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದ ಮೇಲೆ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದಾದರೂ ಹೇಗೆ.. ನಗರದಲ್ಲಿ ಟ್ರಾಫಿಕ್‌ಗೆ ಸಂಬಂಧಿಸಿದಂತೆ ಇಬ್ಬರು ಪಿಎಸ್‌ಐ, ಓರ್ವ ಇನ್ಸ್ ಪೆಕ್ಟರ್ ಇದ್ದಾರೆ. ಇವರುಗಳು ಟ್ರಾಫಿಕ್‌ಗೆ ಸಂಬಂಧಿಸಿದಂತೆ ಡಿವೈಎಸ್ಪಿ ಹಾಗೂ ಅಡಿಷನಲ್ ಎಸ್ಪಿಯವರ ಮಾರ್ಗದರ್ಶನ ಪಡೆದು ಕೆಲಸ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಕೆಲ ಪೊಲೀಸ್ ಸಿಬ್ಬಂದಿಯ ಮಾತಾಗಿದೆಯಾದರೂ ಇದುವರೆಗೂ ಟ್ರಾಫಿಕ್ ಪಿಎಸ್‌ಐಗಳು ಹಾಗೂ ಸಿಪಿಐ ಡಿವೈಎಸ್ಪಿ ಜತೆ ಚರ್ಚಿಸಿದ ಮಾಹಿತಿಯೇ ಇಲ್ಲ. ಡಿವೈಎಸ್ಪಿಯವರು ಟ್ರಾಫಿಕ್ ಉಸ್ತುವಾರಿಯಲ್ಲಿರುವ ಅಡಿಷನಲ್ ಎಸ್ಪಿ ಬಳಿ ಇನ್ನೇನು ಹೇಳಬಲ್ಲರು. ಅಡಿಷನಲ್ ಎಸ್ಪಿಯವರಂತೂ ಕಚೇರಿ ಬಿಟ್ಟು ಎಲ್ಲೂ  ಬರುವುದೇ ಇಲ್ಲ ಅಂದ ಮೇಲೆ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದಾದರೂ ಹೇಗೆ ಎಂಬುದು ನಗರದ ನಾಗರಿಕರ ಪ್ರಶ್ನೆಯಾಗಿದೆ. ಇನ್ನು ಮುಂದೆಯಾದರೂ ಜಿಲ್ಲಾ ಎಸ್ಪಿಯವರು ಟ್ರಾಫಿಕ್ ಸಮಸ್ಯೆ ಸಂಬಂಧ ಸ್ವಲ್ಪ ಮಟ್ಟಿಗಾದರೂ ಗಮನ ಹರಿಸಿ ಕೆಳ ಹಂತದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯಬಹುದೆ, ಇಲ್ಲ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಈ ಬಗ್ಗೆ ಗಮನ ಹರಿಸಿ ಪೊಲೀಸ್ ಅಧಿಕಾರಿಗಳ ಮೇಲೆ ಚಾಟಿ ಬೀಸುವಂತಹ ಪರಿಸ್ಥಿತಿ ಬಂದರೇನಾದರೂ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದೇ ಕಾದು ನೋಡಬೇಕಿದೆ.

Popular Posts