
ಮೃತ ವ್ಯಕ್ತಿಗೂ ವ್ಯಾಕ್ಸಿನ್ : ಪೇಚಿಗೆ ಸಿಲುಕಿದ ಆರೋಗ್ಯ ಇಲಾಖೆ ಅಧಿಕಾರಿಗಳು
ಮೃತ ವ್ಯಕ್ತಿಗೂ ವ್ಯಾಕ್ಸಿನ್ : ಪೇಚಿಗೆ ಸಿಲುಕಿದ ಆರೋಗ್ಯ ಇಲಾಖೆ ಅಧಿಕಾರಿಗಳು
ತುಮಕೂರು : ಕಳೆದ ಏಳು ತಿಂಗಳ ಹಿಂದೆಯೇ ಅಸುನೀಗಿರುವ ವ್ಯಕ್ತಿ ಮತ್ತವರ ಕುಟುಂಬದ ಸದಸ್ಯರು ಜನವರಿ 29ರಂದು (ಶನಿವಾರ) ವ್ಯಾಕ್ಸಿನ್ ಪಡೆದಿರುವುದಾಗಿ ತಪ್ಪು ಸಂದೇಶ ರವಾನಿಸಿ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ರಾಜ್ಯದಾದ್ಯಂತ ಕಳೆದ ಎರಡು ವರ್ಷದಿಂದ ವ್ಯಾಪಕವಾಗಿ ಹರಡಿರುವ ಕೊರೋನಾ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡಿದೆ. ಅಂದು ದುಡಿದು ಅಂದೆ ಹೊಟ್ಟೆ-ಬಟ್ಟೆ ಕಟ್ಟಿ ಕೊಳ್ಳುವ ಲಕ್ಷಾಂತರ ಕುಟುಂಬಗಳು ಜೀವನ ನಿರ್ವಹಿಸಲು ಸಾಧ್ಯವಾಗದೆ ಕಣ್ಣೀರಲ್ಲಿ ಇಂದಿಗೂ ಕೈ ತೋಳೆಯುತ್ತಿದ್ದಾರೆ. ರಾಜ್ಯದ 31 ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆಯೇನು ಹೊರತಾಗಿಲ್ಲ. ಈ ಜಿಲ್ಲೆಯಲ್ಲಿಯೂ ಲಕ್ಷಾಂತರ ಮಂದಿ ಕೊರೋನಕ್ಕೆ ಸಿಲುಕಿ ಮಿಲಿ ಮಿಲಿ ಒದ್ದಾಡಿದ್ದಾರೆ, ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ. ಜನವರಿ 29 ರವರೆಗೆ 1,166 ಮಂದಿ ಅಸುನೀಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಈ ಮಧ್ಯೆ ಮೂರ್ನಾಲ್ಕು ದಿನಗಳ ಹಿಂದೆ ಜಿಲ್ಲೆಯಲ್ಲಿ ಒಂದು ದಿನ ಇಬ್ಬರು ಮಾತ್ರ ಮೃತಪಟ್ಟಿದ್ದರು (15/1/2022) ರಂದು ಆರೋಗ್ಯ ಇಲಾಖೆ ಅಧಿಕಾರಿಗಳು ಇದುವರೆಗೂ ಕೊರಾನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,154 ಎಂದು ಕೊಡುವ ಬದಲು (ಇಂದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,156) ಎಂದು ನಮೂದಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಬಿಟ್ಟು ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುವ ಜೊತೆಗೆ ಜಿಲ್ಲೆಯ ಜನರಲ್ಲೂ ಗೊಂದಲ ಮೂಡಿಸಿ ಬಿಟ್ಟಿದ್ದರು. ಇಂತಹ ಮಹಾಮಹಿಮರು ಆರೋಗ್ಯ ಇಲಾಖೆಯಲ್ಲಿ ಇದ್ದಾರೆ.
ಈಗಲೂ ನಡೆದಿರುವುದು ಇಷ್ಟೇ, ತುಮಕೂರು-ಮೇಳೆಕೋಟೆ ಟೂಡ ಲೇಔಟ್ ವಾಸಿ ದಿವಂಗತ ಎಂ.ಬಸಪ್ಪನವರು ದಿನಾಂಕ 16/7/2021 ರಂದು ಅಸುನೀಗಿದ್ದಾರೆ. ಇವರು ಒಂದು ಲಸಿಕೆ ಮಾತ್ರ ಪಡೆದಿದ್ದಾರೆ. ಇವರು ಸತ್ತು ಏಳು ತಿಂಗಳು ಕಳೆದ ನಂತರ ದಿನಾಂಕ 29/1/2022 ರಂದು ದಿವಂಗತ ಬಸಪ್ಪ ಮತ್ತವರ ಕುಟುಂಬದ ಸದಸ್ಯರು ಲಸಿಕೆ ಪಡೆದಿದ್ದಾರೆ ಎಂದು ಸುಳ್ಳು ಸಂದೇಶ ಆರೋಗ್ಯ ಇಲಾಖೆಯಿಂದ ರವಾನಿಸಲಾಗಿದೆ. ಇದರಿಂದ ಮೃತ ವ್ಯಕ್ತಿಯ ಪುತ್ರ ಪಂಚಾಕ್ಷರಯ್ಯ ಆಶ್ಚರ್ಯಗೊಂಡು ಏನು ಈ ರೀತಿ ಮೆಸೇಜ್ ಬಂದಿದೆ. ನಾವ್ಯಾರು ವ್ಯಾಕ್ಸಿನ್ ಪಡೆದಿಲ್ಲ ಎಂದು ಆರೋಗ್ಯ ಇಲಾಖೆಯಿಂದ ಬಂದ ತಪ್ಪು ಸಂದೇಶದ ಬಗ್ಗೆ ಪತ್ರಿಕೆಗಳಿಗೆ ಮಾಹಿತಿ ಮುಟ್ಟಿಸಿದರು. ನಮ್ಮ ತಂದೆ ನಿಧನರಾಗಿ ಏಳು ತಿಂಗಳು ಕಳೆದಿದೆ. ನಮ್ಮ ಕುಟುಂಬದ ಸದಸ್ಯರು ಮತ್ತು ತಂದೆ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ತಪ್ಪು ಸಂದೇಶ ರವಾನಿಸಿ ಇಲಾಖೆ ಅಧಿಕಾರಿಗಳು ತಪ್ಪು
ಮಾಡುತ್ತಿದ್ದಾರೆ. ಕೇಂದ್ರದ ಪ್ರಧಾನಮಂತ್ರಿಗಳನ್ನು ಮತ್ತು ಆರೋಗ್ಯ ಸಚಿವರನ್ನು ಮೆಚ್ಚಿಸಲಿಕ್ಕೆ ರಾಜ್ಯ
ಸರ್ಕಾರದ ಆರೋಗ್ಯ ಇಲಾಖೆ ಅಧಿಕಾರಿಗಳು ಈ ರೀತಿ ತಪ್ಪು ಸಂದೇಶ ಕೊಡುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ, ಕರ್ನಾಟಕ ರಾಜ್ಯದಲ್ಲಿರುವುದು 6.5ಕೋಟಿ ಜನ ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು 7.5 ಕೋಟಿ ಜನ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ಕೊಟ್ಟು ’ಕೇಂದ್ರದಿಂದ ಶಹಬ್ಬಾಸ್ಗಿರಿ ಪಡೆಯಲು ಹೊರಟಿದ್ದಾರೆನೋ’ ಎಂದು ಅನ್ನಿಸುತ್ತದೆ. ಎಂದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಇಲಾಖೆಯವರು ಕೊಡುತ್ತಿರುವ ಕೋರೊನಾ ಸೋಂಕಿತರ ಅಂಕಿಅಂಶ ನೋಡಿದರೆ ನಿಜಕ್ಕೂ ಮೆಡಿಕಲ್ ಮಾಫಿಯಾ ಇಲ್ಲಿ ಕೆಲಸ ಮಾಡುತ್ತಿದೆ, ಇವರಿಗೆ ಯಾವಾಗ ಬೇಕೊ ಆಗ ಸೋಂಕಿತರ ಸಂಖ್ಯೆ ಹೆಚ್ಚಿಸುವುದು, ಬೇಡವಾದಾಗ ಸೋಂಕಿತರ ಸಂಖ್ಯೆ ಕಡಿಮೆ ನೀಡುವುದು ಇಂತಹ ಪ್ರವೃತ್ತಿ ಬೆಳೆಸಿಕೊಂಡಿರುವುದು ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ, ಸುಳ್ಳು ಅಂಕಿ ಅಂಶಗಳನ್ನು ನೀಡಿ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡುವುದು ಎಷ್ಟು ಸರಿ ಎಂದು ಪ್ರಜ್ಞಾವಂತ ಜನರ ಪ್ರಶ್ನೆಯಾಗಿದೆ,
ಪ್ರತಿನಿತ್ಯ 100 ಅಥವಾ 200ರ ಗಡಿ ದಾಟದ ಅಂಕಿಸಂಖ್ಯೆಯನ್ನು ದಿಡೀರನೆ ಸಾವಿರಕ್ಕೂ ಹೆಚ್ಚು ಸೋಂಕಿತರು ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಾಗ ಎಂತಹವರಾದರೂ ಗೊಂದಲಕ್ಕೀಡಾಗುತ್ತಾರೆ. ಸುಳ್ಳು ಮಾಹಿತಿಯನ್ನು ಕೊಡುವುದನ್ನು ಇನ್ನುಮುಂದಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಟ್ಟು ಜಿಲ್ಲೆಯ ಜನರನ್ನು ಕೊರೊನಾ ಸೋಂಕು ಮೂರನೇ ಅಲೆ ಹೆಚ್ಚುತ್ತಿದೆ ಎಂದು ಹೇಳುವುದನ್ನು ಮೊದಲು ಬಿಟ್ಟು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದು ಇಚ್ಛಾಶಕ್ತಿಯಿಂದ ಜನಸೇವೆ ಮಾಡಲು ಮುಂದಾಗಬೇಕಿದೆ,
ಮುಂದಿನ ದಿನಗಳಲ್ಲಾದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಎಡವಟ್ಟು ಕೆಲಸ ಮಾಡುವುದನ್ನು ಬಿಟ್ಟು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಇಂತಹ ಘಟನೆಗಳು ತುಮಕೂರು ಜಿಲ್ಲೆಯಲ್ಲಿ ಆಗಿಂದಾಗ್ಗೆ ನಡೆದು ಪ್ರಜ್ಞಾವಂತ ಜನರ ಚರ್ಚೆಗೆ ಗ್ರಾಸವಾಗುತ್ತಿವೆ. ತುಮಕೂರು ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಜಿಲ್ಲೆಯ ಜನರು ಗೌರವ, ಪ್ರೀತಿ ಇಟ್ಟುಕೊಂಡಿದ್ದಾರೆ, ಆರೋಗ್ಯ ಇಲಾಖೆಯ ಇಂತಹ ಎಡವಟ್ಟು ಮಾಡುವ ವ್ಯಕ್ತಿಗಳಿಂದ ಇಡೀ ಜಿಲ್ಲೆಯ ಜನರಲ್ಲಿ ಜಿಲ್ಲಾಡಳಿತದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ, ಈ ಹಿನ್ನೆಲೆಯಲ್ಲಿ ಜನಪ್ರಿಯ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ರವರು ತುಮಕೂರು ಡಿಎಚ್‌ಒ ಸೇರಿದಂತೆ ತಪ್ಪೆಸಗುವ ಯಾವುದೇ ಅಧಿಕಾರಿಗಳು ಮತ್ತು ಸಿಬ್ಬಂದಿಯಾಗಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು ಜಿಲ್ಲೆಯ ಜನತೆಗೆ ತಪ್ಪು ಮಾಹಿತಿ ನೀಡದಂತೆ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸದಂತೆ ಎಚ್ಚರಿಕೆ ನೀಡಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಸುಳ್ಳು ಮಾಹಿತಿ ಕೊಟ್ಟರೆ ಸರ್ಕಾರದಿಂದ ತುಮಕೂರು ಡಿಎಚ್‌ಒ ಮತ್ತು ಇನ್ನಿತರ ಅಧಿಕಾರಿಗಳಿಗೆ ಯಾವ ಪ್ರಶಸ್ತಿಯೂ ಬರುವುದಿಲ್ಲ, ಜಿಲ್ಲೆಯ ಜನರಿಂದ ಮೆಚ್ಚುಗೆ ಮಾತುಗಳು ಬರುವುದಿಲ್ಲ, ಹೀಗಾಗಿ ಒಳ್ಳೆಯ ಕೆಲಸ ಮಾಡಿ ಜನರಿಂದ ಮೆಚ್ಚುಗೆ ಪಡೆಯಲು ಶ್ರಮಿಸಿ ಎಂಬುದೇ ಜನರ ಆಗ್ರಹ.
ಕಳೆದ ಏಳು ತಿಂಗಳ ಹಿಂದೆ ಮೃತಪಟ್ಟಿರುವ ಬಸಪ್ಪ ನವರನ್ನು ಎಚ್ಚರಗೊಳಿಸಿ ಯಾವಾಗ ಆರೋಗ್ಯ ಇಲಾಖೆಯವರು ಲಸಿಕೆ ಕೊಟ್ಟು ಬಂದರೋ ಆ ಭಗವಂತನೇ ಬಲ್ಲ.