Date Time: 28-03-2023 23:44

ಕಳ್ಳರನ್ನು ಕ್ಷಮಿಸುವ ಪೊಲೀಸರು..! ಸೆನ್ ಠಾಣೆ ಪೊಲೀಸರಿಂದ ಜೂಜು ಅಡ್ಡೆ ಮೇಲೆ ದಾಳಿ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕಳ್ಳರನ್ನು ಕ್ಷಮಿಸುವ ಪೊಲೀಸರು ಕಂಡು ಬರುತ್ತಿದೆ. ಇದರ ಹಿಂದೆ ಹಣದ ಆಮೀಷವೋ, ಪ್ರಭಾವಿಗಳ ಒತ್ತಡವೋ ಅಥವಾ ಉನ್ನತ ಅಧಿಕಾರಿಗಳ ಸೂಚನೆಯೋ ಎಂಬುದನ್ನು ಆಯಾ ಪೊಲೀಸರೆ ಸ್ಪಷ್ಟನೆ ನೀಡಬೇಕಾಗಿದೆ.
ಕಳೆದ ವಾರ ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದ ಬಟ್ಟೆ ಅಂಗಡಿಯೊಂದರಲ್ಲಿ ಯುವಕನೋರ್ವ ಸುಮಾರು 2 ಸಾವಿರ ರೂ. ಬೆಲೆ ಬಟ್ಟೆ ಖರೀದಿಸಿ ಫೋನ್ ಪೇ ಮೂಲಕ ಹಣ ಪಾವತಿ ಮಾಡಿದ್ದಾನೆ. ಆದರೆ ಪಾವತಿ ಮಾಡಿದ ಹಣ ಅಂಗಡಿ ಮಾಲೀಕನ ಅಕೌಂಟ್ ಜಮೆಯಾಗಿಲ್ಲ. ಫೋನ್ ಪೇ ಮಾಡಿದ ಯುವಕನ ಮೊಬೈಲ್‌ನಲ್ಲಿ ಹಣ ಪಾವತಿಯಾಗಿರುವ ಬಗ್ಗೆ ಮೆಸೇಜ್ ಬಂದಿದೆ. ಇದರಿಂದ ಅಂಗಡಿ ಮಾಲೀಕ ಗೊಂದಲಗೊಂಡು ಯುವಕನ ಜತೆ ವಾಗ್ವಾದ ನಡೆದು, ಫೋನ್ ಪೇ ಮಾಡಿದ ಮೊಬೈಲ್‌ನ್ನು ಯುವಕನಿಂದ ಅಂಗಡಿ ಮಾಲೀಕ ಪಡೆದು, ಹೊಸಬಡಾವಣೆ ಠಾಣೆಯ ಪೊಲೀಸರಿಗೆ ದೂರವಾಣಿ ಮುಖೇನ ವಿಚಾರ ತಿಳಿಸಿದ್ದಾನೆ. 
ಅದರಂತೆ ವಿಚಾರ ತಿಳಿದ ಹೊಸಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಸ್ಥಳಕ್ಕೆ ಬಂದು ಫೋನ್ ಪೇ ಮಾಡಿದ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಇದೊಂದು ಮೋಸದ ಜಾಲ ಎಂಬುದು ಗೊತ್ತಾಗಿದೆ. 2 ದಿನ ಯುವಕನನ್ನು ಠಾಣೆಯಲ್ಲಿ ಇಟ್ಟುಕೊಂಡು ಅದೇನು ವ್ಯವಹಾರ ಕುದುರಿಸಿದರೋ ಗೊತ್ತಿಲ್ಲ. ಯುವಕನನ್ನು ಬಿಟ್ಟಿದ್ದಾರೆ.
ಆತ ಮತ್ತೆ ಬಟ್ಟೆ ಅಂಗಡಿಗೆ ಹೋಗಿ ಮೊಬೈಲ್ ಕೊಡುವಂತೆ ಕೇಳಿದ್ದಾನೆ. ಅಂಗಡಿ ಮಾಲೀಕ " ನಾನು ಠಾಣೆಗೆ ದೂರು ನೀಡಿದ್ದೇನೆ, ಅಲ್ಲಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ನನಗೆ ನೀನು ಪಾವತಿಸಿರುವ ಹಣವೂ ಬಂದಿಲ್ಲ. ಹಾಗಾಗಿ ಮೊಬೈಲ್ ಕೊಡುವುದಿಲ್ಲ. ಠಾಣೆಗೆ ಹೋಗಿ ತಿಳಿದುಕೊಂಡು ನಂತರ ಏನು ಮಾಡಬೇಕು ಎಂದು ತೀರ್ಮಾನಿಸುತ್ತೇನೆ ಎಂದಿದ್ದಾನೆ" ಅದಕ್ಕೆ ಆ ಯುವಕ ಸುಮಾರು 52 ಸಾವಿರ ಬೆಲೆಯ ಮೊಬೈಲ್‌ನ್ನು ಬಟ್ಟೆ ಅಂಗಡಿ ಮಾಲೀಕನಿಗೆ ಬಿಟ್ಟು ಸಿಮ್ ಮಾತ್ರ ತೆಗೆದುಕೊಂಡು ಹೋಗಿದ್ದಾನೆ ಅಂದ ಮೇಲೆ ಡಿಜಿಟಲ್ ಕಳ್ಳನಿಗೂ ಪೊಲೀಸರಿಂದ ಕ್ಷಮೆಯುಂಟೆ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಲ್ಲಿ ಕಾಡುತ್ತಿದೆ. 
 
ಸೆನ್ ಠಾಣೆ ಪೊಲೀಸರಿಂದ ಜೂಜು ಅಡ್ಡೆ ಮೇಲೆ ದಾಳಿ 
ನಿನ್ನೆ ಸುಮಾರು ಸಂಜೆ 5.30 ರಿಂದ ರಾತ್ರಿ 9.10ರ ವರೆಗೆ ಮಾಹಿತಿ ಸಂಗ್ರಹಿಸಿ ಸುಮಾರು 9.30ರ ವೇಳೆಗೆ ನಗರದ ಅಶೋಕ ನಗರದ ಮನೆಯೊಂದರ ಮೇಲೆ ದಾಳಿ ಮಾಡಿ 11 ಮಂದಿ ಜೂಜುಕೋರರನ್ನು ಬಂಧಿಸಿ, ಅವರು ಪಣಕ್ಕಿಟ್ಟಿದ್ದ 5 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೆ. 
ಅಶೋಕ ನಗರದ ಮನೆಯಲ್ಲಿ ಜೂಜಾಡುತ್ತಿದ್ದ ಮಾಹಿತಿ ಕಲೆ ಹಾಕಿದ ಸೆನ್ ಠಾಣಾ ಪೊಲೀಸರು ಮನೆಯ ಮೇಲೆ ದಾಳಿ ಮಾಡಿದ ತುಮಕೂರಿನ ಭಾರೀ ಇಸ್ಪೀಟ್ ಕುಳಗಳು ಸಿಕ್ಕಿದ್ದು, (ಇವರ ಜೂಜಾಟ ಎಂದರೆ ಶೋ ಅಂಡ್ ಪ್ಲೇ. ಅಂದರೆ  ಜೂಜು ಅಡ್ಡೆಗೆ ಪ್ರವೇಶಿಸಬೇಕೆಂದರೆ  ಕನಿಷ್ಠ 1 ಲಕ್ಷ ಹಣ ತೋರಿಸಿದರೆ ಮಾತ್ರ ಜೂಜು ಅಡ್ಡೆಯೊಳಗೆ ಪ್ರವೇಶ). ಅವರಲ್ಲಿದ್ದ ಸುಮಾರು 25 ಲಕ್ಷಕ್ಕೂ ಹೆಚ್ಚು ಹಣವನ್ನು ಕೆಲ ಪೊಲೀಸರು ತಮ್ಮ ಜೇಬಿಗಿಟ್ಟುಕೊಂಡು ಕೇವಲ 5 ಲಕ್ಷ ಹಣವನ್ನು ಪಣಕ್ಕಿಟ್ಟಿದ್ದರು ಎಂದು ಹೇಳಿ ದೂರು ದಾಖಲಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. 
ಸೆನ್ ಠಾಣೆಯ ಉಸ್ತುವಾರಿ ಜಿಲ್ಲಾ ಪೊಲೀಸ್ ಅಧಿಕಾರಿಗೆ ಸೇರಿದ್ದು ಅಂದ ಮೇಲೆ ಈ ವಿಚಾರವಾಗಿ ಜಿಲ್ಲಾ ಎಸ್ಪಿಯವರು ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಒಳ್ಳೆಯದಲ್ಲವೆ. ಇಲ್ಲವಾದಲ್ಲಿ ಪೊಲೀಸರು ಮಾಡಿದ ತಪ್ಪಿನಿಂದ ಜಿಲ್ಲಾ ಎಸ್ಪಿ ಮೇಲೆ ಜನರು ಅನುಮಾನಿಸುವುದಂತೂ ನಿಜ.  
 
 

Popular Posts