
ಮಹಿಳೆ ಕೊಲೆ ಪ್ರಕರಣ : ಸರ್ಕಾರದ ಬೇಜವಾಬ್ದಾರಿ ನಡೆಗೆ ಶಾಸಕ ಡಿ.ಸಿ ಗೌರಿಶಂಕರ್ ಅಸಮಾಧಾನ
ತುಮಕೂರು : ಗ್ರಾಮಾಂತರ ಕ್ಷೇತ್ರ ಹಿರೇಹಳ್ಳಿಯ ಮಜರೆ ಚೋಟೇಸಾಬರಪಾಳ್ಯದಲ್ಲಿ ಹಸು ಮೇಯಿಸಲು ಹೋದ ಮಹಿಳೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣ ಕುರಿತಾಗಿ ಸರ್ಕಾರದ ಬೇಜವಾಬ್ದಾರಿ ನಡೆಗೆ ಶಾಸಕ ಡಿ.ಸಿ ಗೌರಿಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಅವರು ಮಹಿಳೆ ಅತ್ಯಾಚಾರ ಪ್ರಕರಣ ವಿಚಾರವಾಗಿ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದರು, ಸರ್ಕಾರ ಅವಕಾಶವನ್ನು ನಿರಾಕರಿಸಿ ಗೃಹಸಚಿವ ಅರಗ ಜ್ಞಾನೇಂದ್ರ ಅವರು ತನಿಖೆಯ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಿ ಕೈ ತೊಳೆದುಕೊಂಡಿದ್ದಾರೆ.
ಮೈಸೂರಿನಲ್ಲಿ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿರುವ ಪೋಲಿಸ್ ಇಲಾಖೆಗೆ ತುಮಕೂರಿನ ಪ್ರಕರಣದಲ್ಲಿ ಯಾಕೆ ತಿಂಗಳು ಕಳೆದರು ಅರೋಪಿಗಳ ಪತ್ತೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.ಈ ಬಗ್ಗೆ ನಾನು ಕಲಾಪ ಆರಂಭವಾಗುವ ಮೊದಲೇ ಸೆಪ್ಟೆಂಬರ್ 2 ರಂದು ಚುಕ್ಕೆ ಗುರುತಿನ ಪ್ರಶ್ನೆಯನ್ನು ವಿಧಾನಸಭೆ ಕಾರ್ಯದರ್ಶಿಯವರಿಗೆ ಸಲ್ಲಿಸಿ ಚರ್ಚೆಗೆ ಅವಕಾಶ ಕೋರಿದ್ದಲ್ಲದೆ ಈ ಪ್ರಕರಣವನ್ನು ಭೇದಿಸಲು ಎಷ್ಟು ಕಾಲಾವಕಾಶದ ಅವಶ್ಯಕತೆ ಇದೆ ಎಂದು ಪ್ರಶ್ನಿಸಿದೆ.ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಸೆಪ್ಟೆಂಬರ್ 21 ರಂದು ಉತ್ತರ ನೀಡುವುದಾಗಿ ನನಗೆ ಮಾಹಿತಿ ನೀಡಿದ್ದರು.
ಆದರೆ ಬುಧವಾರದ ಕಲಾಪದಲ್ಲಿ ತುಮಕೂರಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ,ಚರ್ಚೆಗೆ ಅವಕಾಶವನ್ನೇ ನೀಡದೆ,ಕೇವಲ 7 ತಂಡ ರಚಿಸಿ 150 ಜನ ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದೇವೆ ಎಂದು ಲಿಖಿತ ಉತ್ತರ ನೀಡಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಶಾಸಕ ಡಿ.ಸಿ ಗೌರಿಶಂಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಹಿಂದುಳಿದ ಸಮುದಾಯದ ಮಹಿಳೆಗಾಗಿರುವ ಅನ್ಯಾಯದ ಬಗ್ಗೆ ಆಡಳಿತಾರೂಢ ಜಿಲ್ಲೆಯ ಸಚಿವರು ಹಾಗೂ ಹಿರಿಯ ಶಾಸಕರು ಸಹ ಧ್ವನಿ ಎತ್ತದೆ ಮೌನವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳ .....
ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಶಾಸಕರಿಂದ ಕೇಳಲಾದ ಪ್ರಶ್ನೆಗೆ ಗೃಹಸಚಿವರು ಮೂರು ವರ್ಷಗಳ ಅಂಕಿ ಅಂಶ ಸಹಿತ ಉತ್ತರ ಒದಗಿಸಿದ್ದು,ತುಮಕೂರು ಗ್ರಾಮಾಂತರದಲ್ಲಿ ಪ್ರಸ್ತುತ ವರ್ಷವೇ 5 ಕೊಲೆ, 31 ಅಕ್ರಮ ಮದ್ಯ ಮಾರಾಟ, 70 ಜೂಜುಗಾರಿಕೆ, 21 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ದಾಖಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ. 2020 ರಲ್ಲಿ 3 ಕೊಲೆ, 54 ಅಕ್ರಮ ಮದ್ಯ ಮಾರಾಟ, 69 ಜೂಜುಗಾರಿಕೆ, 02 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ವರದಿಯಾಗಿದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ಗ್ರಾಮಾಂತರ, ಕೋರ,ಕ್ಯಾಸಂದ್ರ ಪೋಲಿಸರ ಅಕ್ರಮ ಚಟುವಟಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ಬಂದಿರುವುದಿಲ್ಲ ಎಂಬ ಮಾಹಿತಿ ನೀಡಿದ್ದು,ಮಹಿಳಾ ದೌರ್ಜನ್ಯಗಳನ್ನು ತಡೆಯಲು ಗ್ರಾಮ ಸಭೆ ನಡೆಸಿ ಅರಿವು ಮೂಡಿಸಲಾಗುತ್ತಿದೆ.ಇ ಆರ್ ಎಸ್ ಎಸ್ ಗಸ್ತು ವಾಹನ,ಚೀತಾಗಸ್ತು ಮಾಡಿಸಲಾಗುತ್ತಿದ್ದು,ಒಂಟಿ ಮನೆಗಳ ವಿವರ ಸಂಹ್ರಹಿಸಿ ಬೀಟ್ ವ್ಯವಸ್ಥೆ ಚುರುಕುಗೊಳಿಸಲಾಗಿದೆ ಎಂದು ಗೃಹ ಸಚಿವರು ಉತ್ತರಿಸಿದ್ದಾರೆ.ಗೃಹ ಸಚಿವರ ಈ ಉತ್ತರ ಕೇವಲ ಹಾರಿಕೆಯ ಉತ್ತರವಾಗಿದ್ದು ಸರ್ಕಾರ ಹಾಗೂ ಪೋಲಿಸ್ ಇಲಾಖೆಯ ವಿರುದ್ಧ ಜನಹೋರಾಟ ತೀವ್ರಗೊಳಿಸುವ ಅನಿವಾರ್ಯ ಪರಿಸ್ಥಿತಿ ಬಂದಿದೆ ಎಂದು ಶಾಸಕ ಡಿ.ಸಿ ಗೌರಿಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.